image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸಿಬಿಎಸ್ಇ ಆನ್ ಸ್ಕ್ರೀನ್ ಮಾರ್ಕಿಂಗ್ ವಿವಾದ: ಮಂಡಳಿಯ ಚೇರ್ಮನ್, ಕಾರ್ಯದರ್ಶಿ ವರ್ಗಾವಣೆ, ತನಿಖೆಗೆ ಏಕಸದಸ್ಯ ಸಮಿತಿ ನೇಮಕ

ಸಿಬಿಎಸ್ಇ ಆನ್ ಸ್ಕ್ರೀನ್ ಮಾರ್ಕಿಂಗ್ ವಿವಾದ: ಮಂಡಳಿಯ ಚೇರ್ಮನ್, ಕಾರ್ಯದರ್ಶಿ ವರ್ಗಾವಣೆ, ತನಿಖೆಗೆ ಏಕಸದಸ್ಯ ಸಮಿತಿ ನೇಮಕ

ನವದೆಹಲಿ : ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (CBSE) ಪ್ರಸಕ್ತ ಸಾಲಿನಲ್ಲಿ ಪರಿಚಯಿಸಿರುವ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಾದ ಆನ್ ಸ್ಕ್ರೀನ್ ಮಾರ್ಕಿಂಗ್ (OSM) ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಮಂಗಳವಾರ (ಜೂನ್ 2) ಮಹತ್ವದ ಕ್ರಮ ಕೈಗೊಂಡಿದೆ. ಸಿಬಿಎಸ್ಇ ಚೇರ್ಮನ್ ರಾಹುಲ್ ಸಿಂಗ್ ಮತ್ತು ಕಾರ್ಯದರ್ಶಿ ಹಿಮಾಂಶು ಗುಪ್ತಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ವರ್ಗಾವಣೆಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚೆಗೆ ಪ್ರಕಟವಾದ ಸಿಬಿಎಸ್ಇ 12ನೇ ತರಗತಿಯ ಫಲಿತಾಂಶದಲ್ಲಿ ವ್ಯಾಪಕ ದೋಷಗಳು ಕಂಡುಬಂದಿದ್ದವು. ಆನ್ ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯ ಲೋಪದಿಂದಾಗಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಅಸ್ಪಷ್ಟವಾಗಿರುವುದು, ಪುಟಗಳು ನಾಪತ್ತೆಯಾಗಿರುವುದು ಮತ್ತು ಒಂದು ವಿದ್ಯಾರ್ಥಿಯ ಉತ್ತರ ಪತ್ರಿಕೆ ಮತ್ತೊಬ್ಬರಿಗೆ ಬದಲಾಗಿರುವುದು ಸೇರಿದಂತೆ ಹತ್ತಾರು ಗಂಭೀರ ತಾಂತ್ರಿಕ ದೋಷಗಳು ಮುನ್ನೆಲೆಗೆ ಬಂದಿದ್ದವು. ಇದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ವಿವಾದ ತಾರಕಕ್ಕೇರುತ್ತಿದ್ದಂತೆ ಮರುಮೌಲ್ಯಮಾಪನ ವೆಬ್‌ಸೈಟ್ ಕೂಡ ಸೈಬರ್ ದಾಳಿಗೆ ತುತ್ತಾಗಿ ತಾಂತ್ರಿಕವಾಗಿ ಸ್ಥಗಿತಗೊಂಡಿತ್ತು. ಈ ಎಲ್ಲಾ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ಮಂಡಳಿಯ ಇಬ್ಬರು ಉನ್ನತ ಅಧಿಕಾರಿಗಳನ್ನು ಹುದ್ದೆಯಿಂದ ಮುಕ್ತಗೊಳಿಸಿದೆ.

ಇದರೊಂದಿಗೆ, ಒಎಸ್ಎಂ ಸೇವೆಗಳ ಖರೀದಿಯಲ್ಲಿ ನಡೆದಿರುವ ನಿಯಮಾವಳಿಗಳ ಉಲ್ಲಂಘನೆ ಮತ್ತು ಲೋಪದೋಷಗಳ ಕುರಿತು ಸಮಗ್ರ ತನಿಖೆ ನಡೆಸಲು ಕೇಂದ್ರ ಸರ್ಕಾರವು ಏಕಸದಸ್ಯ ತನಿಖಾ ಸಮಿತಿಯನ್ನು ನೇಮಕ ಮಾಡಿದೆ. ಕೆಪಾಸಿಟಿ ಬಿಲ್ಡಿಂಗ್ ಕಮಿಷನ್ ಮುಖ್ಯಸ್ಥರಾದ ಎಸ್. ರಾಧಾ ಚೌಹಾಣ್ ಅವರ ನೇತೃತ್ವದಲ್ಲಿ ಈ ತನಿಖೆ ನಡೆಯಲಿದ್ದು, ಒಂದು ತಿಂಗಳ ಒಳಗಾಗಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (DoPT) ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಸಂಪುಟ ಹೆಚ್ಚುವರಿ ಕಾರ್ಯದರ್ಶಿ ಸತೇಂದ್ರ ಸಿಂಗ್ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇತ್ತೀಚಿನ ಸೈಬರ್ ದಾಳಿಗಳ ಕುರಿತು ಕೇಂದ್ರ ಸರ್ಕಾರದ ಸೈಬರ್ ಕ್ರೈಮ್ ವಿಭಾಗಗಳು ಕೂಡ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

Category
ಕರಾವಳಿ ತರಂಗಿಣಿ