ಉತ್ತರ ಪ್ರದೇಶ : ಗಾಜಿಯಾಬಾದ್‌ನ ಖೋಡಾ ಪ್ರದೇಶದಲ್ಲಿ ಬಕ್ರೀದ್ ದಿನದಂದು 17 ವರ್ಷದ ಸೂರ್ಯ ಪ್ರತಾಪ್ ಚೌಹಾಣ್ ಎಂಬ ಬಾಲಕನನ್ನು ಆತನ ನಾಲ್ವರು ಸ್ನೇಹಿತರೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ ಘಟನೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಈ ಪ್ರಕರಣದ ಪ್ರಮುಖ ಆರೋಪಿ ಅಸಾದ್‌ನನ್ನು ಉತ್ತರ ಪ್ರದೇಶದ ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ. ಮೇ 28 ರಂದು ನಡೆದ ಈ ಹತ್ಯೆ ಪ್ರಕರಣದಲ್ಲಿ ಮುಖ್ಯ ಆರೋಪಿ ಅಸಾದ್‌ನ ತಂದೆಯೇ ಕೊಲೆಗೆ ಪ್ರೇರೇಪಣೆ ನೀಡಿದ್ದ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಘಟನೆ ನಡೆದ ತಕ್ಷಣ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದರೂ, ಮುಖ್ಯ ಆರೋಪಿ ಅಸಾದ್ ತಲೆಮರೆಸಿಕೊಂಡಿದ್ದ. ಆತನ ಪತ್ತೆಗಾಗಿ ಪೊಲೀಸರು 50 ಸಾವಿರ ರೂಪಾಯಿ ಬಹುಮಾನ ಘೋಷಿಸಿ, ಖೋಡಾ ಮತ್ತು ಇಂದಿರಾಪುರಂ ಪೊಲೀಸ್ ತಂಡಗಳು ತೀವ್ರ ಶೋಧ ನಡೆಸುತ್ತಿದ್ದವು.
ತಲೆಮರೆಸಿಕೊಂಡಿದ್ದ ಅಸಾದ್ ತನ್ನ ಸಹಚರರಿಂದ ಹಣ ಸಂಗ್ರಹಿಸಿ ಉತ್ತರ ಪ್ರದೇಶದಿಂದಲೇ ಪಲಾಯನ ಮಾಡಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಪಾಸಣೆ ನಡೆಸುತ್ತಿದ್ದಾಗ, ಅಸಾದ್ ತನ್ನ ಸಹಚರನೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಬರುತ್ತಿರುವುದು ಪತ್ತೆಯಾಗಿದೆ. ಪೊಲೀಸರು ಆತನನ್ನು ತಡೆಯಲು ಯತ್ನಿಸಿದಾಗ, ಅಸಾದ್ ಪೊಲೀಸ್ ತಂಡದ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾನೆ. ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿಯಾಗಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಅಸಾದ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಎನ್‌ಕೌಂಟರ್ ನಡೆದ ಸ್ಥಳದಿಂದ ಬೈಕ್ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತಪ್ಪಿಸಿಕೊಂಡಿರುವ ಮತ್ತೊಬ್ಬ ಸಹಚರನಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಉಪ ಪೊಲೀಸ್ ಆಯುಕ್ತ ಧವಾಲ್ ಜೈಸ್ವಾಲ್ ತಿಳಿಸಿದ್ದಾರೆ.
ಈ ಘಟನೆಯ ಮಧ್ಯೆ ಕೊಲೆ ನಡೆದ ಸ್ಥಳದ ಸುತ್ತಮುತ್ತಲಿನ ಜನರ ವರ್ತನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೊಲೆ ನಡೆಯುವಾಗ ತಮಗೆ ಏನೂ ಗೊತ್ತಿಲ್ಲ, ಪ್ರತ್ಯಕ್ಷ ಸಾಕ್ಷಿಗಳಾಗಿದ್ದರೂ ಏನೂ ನೋಡಿಲ್ಲ ಎಂದು ನಾಟಕವಾಡಿದ್ದ ಸ್ಥಳೀಯರು, ಒಬ್ಬಾತ ತನಗೆ ಕಿವಿ ಕೇಳಿಸುವುದಿಲ್ಲ, ಮಾತು ಬರಲ್ಲ ಎಂದು ನಟಿಸಿದ್ದನು. ಆದರೆ ಅಸಾದ್ ಎನ್‌ಕೌಂಟರ್ ಆಗುತ್ತಿದ್ದಂತೆ ಅದೇ ವ್ಯಕ್ತಿ ರೊಚ್ಚಿಗೆದ್ದು ಪೊಲೀಸರ ಕ್ರಮ ತಪ್ಪು ಎಂದು ಮಾತನಾಡಲು ಶುರುಮಾಡಿರುವುದು ಸ್ಥಳೀಯರ ದುರುದ್ದೇಶವನ್ನು ಬಹಿರಂಗಪಡಿಸಿದೆ.
ಮಗನನ್ನು ಕಳೆದುಕೊಂಡ ಸೂರ್ಯ ಪ್ರತಾಪ್ ತಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಎನ್‌ಕೌಂಟರ್ ಆದ ಅಸಾದ್‌ನ ಮುಖವನ್ನು ನಾನು ನೋಡಬೇಕು, ಆಗಲೇ ನನ್ನ ಆತ್ಮಕ್ಕೆ ಶಾಂತಿ ಸಿಗುವುದು. ನನ್ನ ಮಗನ ಸಾವಿಗೆ ಕಾರಣರಾದ ಉಳಿದ ಆರೋಪಿಗಳಿಗೂ ಇದೇ ರೀತಿಯ ಶಿಕ್ಷೆಯಾಗಬೇಕು ಮತ್ತು ಅವರೆಲ್ಲರ ಮನೆಗಳನ್ನು ಬುಲ್ಡೋಜರ್‌ಗಳ ಮೂಲಕ ನೆಲಸಮ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಹಂತಕರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಕಠಿಣ ಶಿಕ್ಷೆ ಖಚಿತ ಎಂದಿದ್ದಾರೆ. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕೂಡ ಈ ಘಟನೆಯನ್ನು ಅತ್ಯಂತ ದುಃಖಕರ ಎಂದು ಕರೆದಿದ್ದು, ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಸ್ತುತ ಉಳಿದ ಆರೋಪಿಗಳಿಗೂ ಕಠಿಣ ಶಿಕ್ಷೆಯಾಗಬೇಕು ಎಂಬ ಸಾರ್ವಜನಿಕರ ಪ್ರತಿಭಟನೆಗಳು ಜೋರಾಗಿ ನಡೆಯುತ್ತಿವೆ.