image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಗಡಿ ಭದ್ರತೆಗೆ ಬಿಗಿಯಾದ ರಕ್ಷಣಾ ಕೋಟೆ: ಅಕ್ರಮ ನುಸುಳುಕೋರರ ಮಟ್ಟಹಾಕಲು ಸಿಎಂ ಸುವೇಂದು ಅಧಿಕಾರಿ ಮಿಂಚಿನ ಆಕ್ಷನ್ ಪ್ಲಾನ್

ಗಡಿ ಭದ್ರತೆಗೆ ಬಿಗಿಯಾದ ರಕ್ಷಣಾ ಕೋಟೆ: ಅಕ್ರಮ ನುಸುಳುಕೋರರ ಮಟ್ಟಹಾಕಲು ಸಿಎಂ ಸುವೇಂದು ಅಧಿಕಾರಿ ಮಿಂಚಿನ ಆಕ್ಷನ್ ಪ್ಲಾನ್

ಪಶ್ಚಿಮ ಬಂಗಾಳ : ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೋಹಿಂಗ್ಯಾಗಳ ವೋಟ್ ಬ್ಯಾಂಕ್ ಸಿಂಡಿಕೇಟ್ ಅನ್ನು ಬುಡಸಮೇತ ಕಿತ್ತೆಸೆಯಲು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ನೇತೃತ್ವದ ನೂತನ ಸರ್ಕಾರವು ಭೀಕರ ಆಕ್ಷನ್ ಪ್ಲಾನ್ ಜಾರಿಗೆ ತಂದಿದೆ. ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ರಕ್ಷಣಾ ಪಡೆಯ (BSF) ಹೊಸ ಔಟ್‌ಪೋಸ್ಟ್‌ಗಳ ನಿರ್ಮಾಣ ಹಾಗೂ ಬಲವಾದ ಮುಳ್ಳುತಂತಿ ಬೇಲಿ ಅಳವಡಿಕೆಯನ್ನು ಚುರುಕುಗೊಳಿಸಲು ಬಂಗಾಳ ಸರ್ಕಾರವು ಪ್ರಪ್ರಥಮ ಬಾರಿಗೆ ದಾಖಲೆಯ 142.79 ಎಕರೆ ಹೆಚ್ಚುವರಿ ಭೂಮಿಯನ್ನು ಬಿಎಸ್‌ಎಫ್‌ಗೆ ಅಧಿಕೃತವಾಗಿ ಹಸ್ತಾಂತರಿಸಿದೆ.

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ನಡೆಸಿದ ಮೊದಲ ಸಂಪುಟ ಸಭೆಯಲ್ಲೇ ಗಡಿ ಭದ್ರತೆಯನ್ನು ಬಲಪಡಿಸುವ ಈ ಕ್ರಾಂತಿಕಾರಿ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಆ ಐತಿಹಾಸಿಕ ನಿರ್ಧಾರ ಈಗ ಅತ್ಯಂತ ವೇಗವಾಗಿ ಅನುಷ್ಠಾನಗೊಳ್ಳುತ್ತಿರುವುದು ಗಡಿ ಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ.

ಈ ಮಹತ್ವದ ಬೆಳವಣಿಗೆಯ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಬಂಗಾಳದ ಗಡಿ ಭಾಗಗಳಲ್ಲಿ ಭದ್ರತೆಯನ್ನು ಇನ್ನು ಹತ್ತು ಪಟ್ಟು ಬಲಪಡಿಸಲು ನಮ್ಮ ಸರ್ಕಾರ ತೀವ್ರಗತಿಯ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ, ಬಿಎಸ್‌ಎಫ್ ಔಟ್‌ಪೋಸ್ಟ್‌ಗಳು ಮತ್ತು ಮುಳ್ಳುತಂತಿ ಬೇಲಿ ನಿರ್ಮಾಣಕ್ಕಾಗಿ ಹೆಚ್ಚುವರಿ ಭೂಮಿಯನ್ನು ಹಸ್ತಾಂತರಿಸಲಾಗಿದ್ದು, ಒಟ್ಟು ವಿಸ್ತೀರ್ಣ ಈಗ 142.79 ಎಕರೆಗೆ ತಲುಪಿದೆ ಎಂದು ಪ್ರಕಟಿಸಿದ್ದಾರೆ. ಮುಂದುವರಿದು ಮಾತನಾಡಿರುವ ಅವರು, ಇದು ನಮ್ಮ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆಯ ನಿರ್ಧಾರದಂತೆ ನಡೆದಿದ್ದು, ಕೇವಲ 45 ದಿನಗಳ ಒಳಗೆ ಗಡಿಯಲ್ಲಿ ಒಟ್ಟು 600 ಎಕರೆ ಭೂಮಿಯನ್ನು ಬಿಎಸ್‌ಎಫ್‌ಗೆ ಒಪ್ಪಿಸುವ ನಮ್ಮ ಮಹತ್ವಾಕಾಂಕ್ಷಿ ಗುರಿಯತ್ತ ಇಟ್ಟಿರುವ ಅತ್ಯಂತ ಪ್ರಮುಖವಾದ ಮೈಲಿಗಲ್ಲಾಗಿದೆ ಎಂದು ದೀದಿ ಸಾಮ್ರಾಜ್ಯದ ಹಳೇ ನೀತಿಗಳಿಗೆ ಚಾಟಿ ಬೀಸಿದ್ದಾರೆ.

ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ವರದಿಯ ಪ್ರಕಾರ, ನುಸುಳುವಿಕೆಯ ಪ್ರಮುಖ ಹಾದಿಯಾಗಿದ್ದ ಜಿಲ್ಲೆಗಳಿಗೆ ಅತಿ ಹೆಚ್ಚು ಭೂಮಿಯನ್ನು ಮಂಜೂರು ಮಾಡಲಾಗಿದೆ. ಮುರ್ಷಿದಾಬಾದ್ ಜಿಲ್ಲೆಗೆ ಅತ್ಯಧಿಕವಾಗಿ ಬರೋಬ್ಬರಿ 38.805 ಎಕರೆ ಭೂಮಿಯನ್ನು ಬೇಲಿ ನಿರ್ಮಾಣಕ್ಕೆ ನೀಡಲಾಗಿದ್ದರೆ, ಜಲ್ಪೈಗುರಿ ಜಿಲ್ಲೆಗೆ ಎರಡನೇ ಅತಿ ಹೆಚ್ಚು ಅಂದರೆ 35.165 ಎಕರೆ ಜಮೀನು ಹಸ್ತಾಂತರ ಮಾಡಲಾಗಿದೆ. ಹಾಗೆಯೇ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಗಡಿ ರಕ್ಷಣೆಯ ಕಾವಲು ಹೆಚ್ಚಿಸಲು 22.95 ಎಕರೆ ಭೂಮಿಯನ್ನು ಮುಡುಪಾಗಿಡಲಾಗಿದೆ. ಕಳೆದ ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಗಡಿ ಬೇಲಿ ನಿರ್ಮಾಣದ ಭೂಸ್ವಾಧೀನ ಪ್ರಕ್ರಿಯೆಯನ್ನು ಸುವೇಂದು ಅಧಿಕಾರಿ ಸರ್ಕಾರ ಕೇವಲ ಮೂರೇ ವಾರಗಳಲ್ಲಿ ಪೂರ್ಣಗೊಳಿಸಿರುವುದು ಕೇಂದ್ರ ಗೃಹ ಸಚಿವಾಲಯದ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.

ಭಾರತದ ಇತರೆಲ್ಲಾ ರಾಜ್ಯಗಳಿಗಿಂತ ಪಶ್ಚಿಮ ಬಂಗಾಳವು ಬಾಂಗ್ಲಾದೇಶದೊಂದಿಗೆ ಅತ್ಯಂತ ಸುದೀರ್ಘವಾದ 2,216 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ನುಸುಳುವಿಕೆ ಮತ್ತು ಕಳ್ಳಸಾಗಣೆಯೇ ಪ್ರಮುಖ ಚುನಾವಣಾ ಅಸ್ತ್ರವಾಗಿತ್ತು. ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರವು ವೋಟ್ ಬ್ಯಾಂಕ್ ಆಸೆಗೆ ಬಿದ್ದು ಗಡಿ ಬೇಲಿ ನಿರ್ಮಾಣಕ್ಕೆ ಭೂಮಿ ನೀಡದೆ ಬಿಎಸ್‌ಎಫ್‌ಗೆ ಅಸಹಕಾರ ತೋರುತ್ತಿದೆ ಎಂದು ಆರೋಪಿಸಲಾಗಿತ್ತು.

ಈಗ ಬಂಗಾಳದಲ್ಲಿ ಹೊಸ ಸರ್ಕಾರ ಅಧಿಕಾರ ಹಿಡಿದ ತಕ್ಷಣವೇ ಅಕ್ರಮ ವಲಸಿಗರ ವಿರುದ್ಧ ಪತ್ತೆ ಹಚ್ಚಿ, ಮತದಾರರ ಪಟ್ಟಿಯಿಂದ ವಜಾಗೊಳಿಸಿ, ಗಡೀಪಾರು ಮಾಡಿ ಎಂಬ "ತ್ರಿಶೂಲ ನೀತಿ"ಯನ್ನು ಜಾರಿಗೊಳಿಸಿದೆ. ಇದರ ಜೊತೆಗೆ ಗಡಿ ಜಿಲ್ಲೆಗಳಲ್ಲಿ ಡಿಟೆನ್ಷನ್ ಹೋಲ್ಡಿಂಗ್ ಸೆಂಟರ್‌ಗಳನ್ನು ಸ್ಥಾಪಿಸಿ, ಅಕ್ರಮ ವಲಸಿಗರನ್ನು ನೇರವಾಗಿ ಬಿಎಸ್‌ಎಫ್‌ಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಈ ಮುಳ್ಳುತಂತಿ ಬೇಲಿ ನಿರ್ಮಾಣ ಕಾರ್ಯವು ನುಸುಳುಕೋರರ ಪಾಲಿಗೆ ಮರಣಶಾಸನ ಬರೆದಂತಾಗಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸರ್ಕಾರದ ಈ ಮಿಂಚಿನ ಆಕ್ಷನ್‌ನಿಂದಾಗಿ ಇಡೀ ಭಾರತ-ಬಾಂಗ್ಲಾ ಗಡಿಯು ಸಂಪೂರ್ಣವಾಗಿ ರಕ್ಷಣಾ ಕವಚದೊಳಗೆ ಬರಲಿದ್ದು, ಇನ್ಮೇಲೆ ಕಳ್ಳಮಾರ್ಗದ ಮೂಲಕ ಭಾರತದೊಳಗೆ ಒಂದೇ ಒಂದು ಹೆಜ್ಜೆ ಇಡಲೂ ನುಸುಳುಕೋರರಿಗೆ ಸಾಧ್ಯವಾಗದಂತೆ ಬಿಗಿಯಾದ ರಕ್ಷಣಾ ಕೋಟೆಯನ್ನು ನಿರ್ಮಿಸಲಾಗುತ್ತಿದೆ.

Category
ಕರಾವಳಿ ತರಂಗಿಣಿ