ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದಶಕಗಳ ಬಳಿಕ ನಡೆದಿರುವ ರಾಜಕೀಯ ಬದಲಾವಣೆ ಹಾಗೂ ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೋಹಿಂಗ್ಯಾಗಳ ವಿರುದ್ಧ ಆಡಳಿತ ಯಂತ್ರವು ಅತ್ಯಂತ ಕಠಿಣವಾಗಿ ಮುಗಿಬಿದ್ದಿದೆ. ಸಿಎಂ ಸುವೇಂದು ಅಧಿಕಾರಿ ಅವರ ಗಡೀಪಾರು ಮತ್ತು ಬಂಧನದ ಕಠಿಣ ಆದೇಶದಿಂದಾಗಿ ಅಕ್ರಮ ವಲಸಿಗರಲ್ಲಿ ಭೀತಿ ಶುರುವಾಗಿದ್ದು, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಹಸ್ರಾರು ನುಸುಳುಕೋರರು ಸ್ವದೇಶಕ್ಕೆ ಮರಳಲು ಗಡಿ ಭಾಗದತ್ತ ಮುಖ ಮಾಡಿದ್ದಾರೆ. ಭಾರತ-ಬಾಂಗ್ಲಾದೇಶ ಗಡಿಯ ಬಿತ್ರಿ ಹಕಿಂಪುರ್ ಚೆಕ್‌ಪೋಸ್ಟ್ ಸೇರಿದಂತೆ ವಿವಿಧ ಗಡಿ ಪ್ರದೇಶಗಳಲ್ಲಿ ಬಾಂಗ್ಲಾ ಪ್ರಜೆಗಳು ಹಿಂಡುಹಿಂಡಾಗಿ ಜಮಾಯಿಸುತ್ತಿರುವ ದೃಶ್ಯಗಳು ಈಗ ಇಡೀ ದೇಶದ ಗಮನ ಸೆಳೆದಿವೆ.
ಕೆಲವು ತಿಂಗಳುಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲಾಗಿದ್ದ ಎಸ್‌ಐಆರ್ (SIR) ಪ್ರಕ್ರಿಯೆಯ ಸಂದರ್ಭದಲ್ಲೂ ಉತ್ತರ 24 ಪರಗಣ ಜಿಲ್ಲೆಯ ಸ್ವರೂಪನಗರದ ಬಿತ್ರಿ ಹಕಿಂಪುರ್ ಗಡಿ ಮೂಲಕ ಸಾವಿರಾರು ಅಕ್ರಮ ವಲಸಿಗರು ದೇಶ ಬಿಟ್ಟು ಓಡಿಹೋಗಿದ್ದರು. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಆಡಳಿತಾತ್ಮಕ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಮತ್ತದೇ ದೃಶ್ಯಗಳು ಮರುಕಳಿಸಿದ್ದು, ಬಾಂಗ್ಲಾ ಪ್ರಜೆಗಳು ತಾವಾಗಿಯೇ ಗಡಿ ದಾಟಲು ಬಿಎಸ್‌ಎಫ್ (BSF) ಒಪ್ಪಿಗೆಗಾಗಿ ಕಾಯುತ್ತಿದ್ದಾರೆ.
ಬಿತ್ರಿ ಹಕಿಂಪುರ್ ಗಡಿ ಚೆಕ್‌ಪೋಸ್ಟ್ ಬಳಿ ತಾಯ್ನಾಡಿಗೆ ಮರಳಲು ಸರತಿಯ ಸಾಲಿನಲ್ಲಿ ನಿಂತಿದ್ದ ಹಲವು ಬಾಂಗ್ಲಾದೇಶಿ ಅಕ್ರಮ ವಲಸಿಗರು ಮಾಧ್ಯಮಗಳ ಮುಂದೆ ಆಘಾತಕಾರಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ತಾವು ಸುಮಾರು ಒಂದೂವರೆ ವರ್ಷದ ಹಿಂದೆ ಗಡಿ ಏಜೆಂಟರು ಮತ್ತು ಬ್ರೋಕರ್‌ಗಳಿಗೆ ಭಾರಿ ಹಣ ನೀಡಿ ಕಳ್ಳಮಾರ್ಗದ ಮೂಲಕ ಭಾರತದ ಗಡಿ ನುಸುಳಿದ್ದಾಗಿ ಹಾಗೂ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾಗಿ ವಲಸಿಗರು ಒಪ್ಪಿಕೊಂಡಿದ್ದಾರೆ. ಆದರೆ ಈಗಿನ ಸರ್ಕಾರದ ಕಠಿಣ ನಿಲುವು ನೋಡಿದರೆ ತಮಗೆ ಜೈಲು ಶಿಕ್ಷೆಯಾಗುವ ಭೀತಿ ಇರುವುದರಿಂದ ನಾವಾಗಿಯೇ ಮರಳುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಬಿಎಸ್‌ಎಫ್ ಅಧಿಕಾರಿಗಳಿಂದ ಹಸಿರು ನಿಶಾನೆ ಸಿಗುತ್ತಿದ್ದಂತೆ ಇವರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗುವುದು ಎಂದು ವರದಿಯಾಗಿದೆ.