ಪಶ್ಚಿಮ ಬಂಗಾಳ : ಬಕ್ರೀದ್ ಹಬ್ಬಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗಳು ತೀವ್ರಗೊಂಡಿವೆ. ಹೊಸ ಬಿಜೆಪಿ ಸರ್ಕಾರ ಬಕ್ರೀದ್‌ಗೆ ನೀಡಲಾಗಿದ್ದ ಎರಡು ದಿನಗಳ ಸರ್ಕಾರಿ ರಜೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿದರೆ, ಮತ್ತೊಂದೆಡೆ ಪ್ರಾಣಿ ಬಲಿ ಕುರಿತ ಕಠಿಣ ನಿಯಮಗಳಿಗೆ ಕಲ್ಕತ್ತಾ ಹೈಕೋರ್ಟ್ ಬೆಂಬಲ ನೀಡಿದೆ. ಈ ಎರಡೂ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ. ರಾಜ್ಯ ಹಣಕಾಸು ಇಲಾಖೆ ಬಿಡುಗಡೆ ಮಾಡಿದ ಪರಿಷ್ಕೃತ ಅಧಿಸೂಚನೆಯ ಪ್ರಕಾರ, ಈ ಹಿಂದೆ ಮೇ 26 ಮತ್ತು 27 ರಂದು ಘೋಷಿಸಲಾಗಿದ್ದ ರಜೆಯನ್ನು ರದ್ದುಗೊಳಿಸಲಾಗಿದೆ. ಈ ವರ್ಷ ಬಕ್ರೀದ್ ಆಚರಣೆ ಮೇ 28 ರಂದು ನಡೆಯಲಿರುವ ಹಿನ್ನೆಲೆಯಲ್ಲಿ, ಆ ದಿನವನ್ನು ಮಾತ್ರ ಅಧಿಕೃತ ಸರ್ಕಾರಿ ರಜೆ ಎಂದು ಘೋಷಿಸಲಾಗಿದೆ. ಉಳಿದ ಎರಡು ದಿನಗಳು ಸರ್ಕಾರಿ ಕಚೇರಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸಾಮಾನ್ಯ ಕಾರ್ಯದಿನಗಳಾಗಿರಲಿವೆ.
ಇದೇ ವೇಳೆ ಬಕ್ರೀದ್ ಸಂದರ್ಭದಲ್ಲಿ ಪ್ರಾಣಿ ಬಲಿ ನಿಯಂತ್ರಣಕ್ಕೆ ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳಿಗೆ ಕಲ್ಕತ್ತಾ ಹೈಕೋರ್ಟ್ ಬೆಂಬಲ ನೀಡಿದೆ. 14 ವರ್ಷಕ್ಕಿಂತ ಮೇಲ್ಪಟ್ಟ ಪ್ರಾಣಿಗಳಿಗೆ ಮಾತ್ರ ಬಲಿ ನೀಡಲು ಅನುಮತಿ ನೀಡಲಾಗಿದ್ದು, ಪಶುವೈದ್ಯರು ಹಾಗೂ ಸ್ಥಳೀಯ ಆಡಳಿತದ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗೋಹತ್ಯೆ ನಿಷೇಧಿಸಿರುವ ಕ್ರಮಕ್ಕೂ ಕೋರ್ಟ್ ತಡೆ ನೀಡಲು ನಿರಾಕರಿಸಿದೆ. ಸರ್ಕಾರದ ಇಂತಹ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಕಾಣಿಸಿಕೊಂಡಿದೆ. ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಕಠಿಣ ನಿಯಮಾವಳಿಗಳ ಕಾರಣದಿಂದಾಗಿ ಕೋಲ್ಕತ್ತಾದಲ್ಲಿ ಗೋಮಾಂಸದ ಬೆಲೆ ದಿಢೀರ್ ಏರಿಕೆಯಾಗಿದ್ದು, ಕೆಲವೆಡೆ ಪ್ರತಿ ಕೆಜಿಗೆ 600 ರೂಪಾಯಿವರೆಗೆ ತಲುಪಿದೆ ಎಂದು ವರದಿಗಳು ತಿಳಿಸಿವೆ. ಸರ್ಕಾರದ ಈ ನಿರ್ಧಾರಗಳು ಹಾಗೂ ನ್ಯಾಯಾಲಯದ ಆದೇಶದ ಸುತ್ತ ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ಮುಂದುವರಿದಿವೆ.