ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ದಿಢೀರ್ ಸಂಚಲನ ಸೃಷ್ಟಿಸಿರುವ ವಿಡಂಬನಾತ್ಮಕ ವೇದಿಕೆ 'ಕಾಕ್ರೋಚ್ ಜನತಾ ಪಾರ್ಟಿ'ಯ (CJP) ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಹಿರಿಯ ಸಂಸದ ಶಶಿ ತರೂರ್ ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರದ ಈ ಕ್ರಮವನ್ನು "ಅತ್ಯಂತ ದುರದೃಷ್ಟಕರ ಮತ್ತು ಮೂರ್ಖತನದ ನಿರ್ಧಾರ" ಎಂದು ಕರೆದಿರುವ ಅವರು, ದೇಶದ ಯುವಜನತೆಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಮುಕ್ತ ವೇದಿಕೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಇದೇ ವೇಳೆ, ದೇಶದ ವಿರೋಧ ಪಕ್ಷಗಳಿಗೆ ಮಹತ್ವದ ಸಲಹೆಯೊಂದನ್ನು ನೀಡಿರುವ ತರೂರ್, ಯುವ ಸಮೂಹದ ಈ ಆಕ್ರೋಶ ಮತ್ತು ಭಿನ್ನಮತವನ್ನು ವಿಪಕ್ಷಗಳು ತಮಗೆ ಸಿಕ್ಕ ಬಹುದೊಡ್ಡ ಅವಕಾಶವನ್ನಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿಯ ದಿಢೀರ್ ಬೆಳವಣಿಗೆಯನ್ನು ಕಂಡು ತಾವೂ ಆಶ್ಚರ್ಯಚಕಿತರಾಗಿರುವುದಾಗಿ ಶಶಿ ತರೂರ್ 'ಎಕ್ಸ್' ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಕೇವಲ ಐದೇ ದಿನಗಳಲ್ಲಿ ಇನ್‌ಸ್ಟಾಗ್ರಾಂನಲ್ಲಿ 1.5 ಮಿಲಿಯನ್ (ಈಗ 1.9 ಕೋಟಿಗೂ ಹೆಚ್ಚು) ಫಾಲೋವರ್ಸ್ ದಾಟಿರುವ #CockroachJantaParty ಯ ಬೆಳವಣಿಗೆಯನ್ನು ಕಂಡು ನಾನು ನಿಜಕ್ಕೂ ಬೆರಗಾಗಿದ್ದೇನೆ. ದೇಶದ ಇಂದಿನ ಯುವ ಪೀಳಿಗೆಯ ಹತಾಶೆ ಮತ್ತು ಆಕ್ರೋಶ ನನಗೆ ಅರ್ಥವಾಗುತ್ತದೆ. ಅವರು ಯಾಕಾಗಿ ಈ ವೇದಿಕೆಯನ್ನು ಇಷ್ಟಪಡುತ್ತಿದ್ದಾರೆ ಎಂಬುದೂ ನನಗೆ ತಿಳಿಯುತ್ತದೆ ಎಂದು ತರೂರ್ ಹೇಳಿದ್ದಾರೆ. ಕಳೆದ ಬುಧವಾರವಷ್ಟೇ ಕಾನೂನಾತ್ಮಕ ಬೇಡಿಕೆಯ ನೆಪ ಒಡ್ಡಿ, 2 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದ 'ಕಾಕ್ರೋಚ್ ಜನತಾ ಪಾರ್ಟಿ'ಯ ಅಧಿಕೃತ 'ಎಕ್ಸ್' ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿತ್ತು.
ನಿರ್ಬಂಧಿಸಲಾಗಿರುವ 'ಎಕ್ಸ್' ಖಾತೆಯನ್ನು ತಕ್ಷಣವೇ ಮರುಚಾಲನೆಗೊಳಿಸಬೇಕು ಎಂದು ಒತ್ತಾಯಿಸಿರುವ ಶಶಿ ತರೂರ್, ಯುವಕರ ಭಾವನೆಗಳನ್ನು ಹತ್ತಿಕ್ಕುವ ಸಲುವಾಗಿ ಅವರ ಖಾತೆಯನ್ನು ನಿರ್ಬಂಧಿಸಿರುವುದು ಅತ್ಯಂತ ದ್ರೋಹದ ಕೆಲಸ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ, ಹಾಸ್ಯ, ವಿಡಂಬನೆ ಮತ್ತು ಜನರ ಹತಾಶೆಯನ್ನು ಹೊರಹಾಕಲು ಮುಕ್ತ ಅವಕಾಶವಿರಬೇಕು. ಆದ್ದರಿಂದ 'ಸಿಜೆಪಿ' ಅಕೌಂಟ್ ಅನ್ನು ಮುಚ್ಚುವ ಬದಲು, ಅದು ಮುಕ್ತವಾಗಿ ಕಾರ್ಯನಿರ್ವಹಿಸಲು ಬಿಡಿ ಎಂದು ಆಗ್ರಹಿಸಿದ್ದಾರೆ. ಈ ವಿನೂತನ ಯುವ ಚಳವಳಿಯ ಭವಿಷ್ಯ ಏನಾಗಬಹುದು ಎಂಬುದು ತಮಗೆ ನಿಖರವಾಗಿ ತಿಳಿದಿಲ್ಲ ಎಂದಿರುವ ಅವರು, ಇದರ ಹಿಂದೆ ಇರುವ ಯುವಕರು ಈ ಭಾರಿ ಶಕ್ತಿಯನ್ನು ಮುಖ್ಯವಾಹಿನಿಯ ರಾಜಕೀಯಕ್ಕೆ ತರುವಂತಾಗಬೇಕು. ಮುಂಬರುವ ದಿನಗಳಲ್ಲಿ ತಮ್ಮ ಅಮೂಲ್ಯವಾದ ಮತದಾನದ ಮೂಲಕ ದೇಶದಲ್ಲಿ ಬದಲಾವಣೆಯ ಧ್ವನಿಯಾಗಬೇಕು ಮತ್ತು ಯಾರೂ ಇವರನ್ನು ನಿರ್ಲಕ್ಷಿಸಲು ಸಾಧ್ಯವಾಗದ ಮಟ್ಟಿಗೆ ಬೆಳೆಯಬೇಕು ಎಂದು ಆಶಿಸಿದ್ದಾರೆ.
ದೇಶದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳು ಈ ಟ್ರೆಂಡ್ ಅನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ತರೂರ್ ಹೇಳಿದ್ದಾರೆ. ವೈರಲ್ ಆಗುತ್ತಿರುವ ಈ ಯುವ ಆಕ್ರೋಶದ ಅಲೆಯನ್ನು ವಿರೋಧ ಪಕ್ಷಗಳು ಸರಿಯಾಗಿ ಬಳಸಿಕೊಳ್ಳಬೇಕು. ಇದು ವಿಪಕ್ಷಗಳಿಗೆ ಸಿಕ್ಕಿರುವ ಅತ್ಯಂತ ದೊಡ್ಡ ಅವಕಾಶ. ಯುವಕರನ್ನು ತಮ್ಮತ್ತ ಸೆಳೆದುಕೊಳ್ಳಲು ಮತ್ತು ಅವರ ಪರವಾಗಿ ಧ್ವನಿ ಎತ್ತಲು ರಾಜಕೀಯ ಪಕ್ಷಗಳು ಕೆಲಸ ಮಾಡಬೇಕು ಎಂದು ಅವರು ಬರೆದುಕೊಂಡಿದ್ದಾರೆ.
ಕೇವಲ ಒಂದು ವಾರದ ಹಿಂದೆ ಇಂಟರ್ನೆಟ್ ಜಗತ್ತಿಗೆ ಕಾಲಿಟ್ಟ ಈ ವಿಡಂಬನಾತ್ಮಕ ವೇದಿಕೆ ಈಗ ದೇಶಾದ್ಯಂತ ಭಾರಿ ಸುನಾಮಿ ಎಬ್ಬಿಸಿದೆ. ತನ್ನನ್ನು ತಾನು "ಯುವಕರಿಗಾಗಿ, ಯುವಕರಿಂದ ರೂಪುಗೊಂಡ ಯುವಕರ ರಾಜಕೀಯ ರಂಗ" ಎಂದು ಕರೆದುಕೊಳ್ಳುವ ಈ ವೇದಿಕೆ, "ಸೋಮಾರಿಗಳು ಮತ್ತು ನಿರುದ್ಯೋಗಿಗಳ ಧ್ವನಿ" ಎಂದು ಘೋಷಿಸಿಕೊಂಡಿದೆ. ಅಭಿಜೀತ್ ದಿಪ್ಕೆ ಎಂಬುವವರು ಈ ವೆಬ್‌ಸೈಟ್ ಸೃಷ್ಟಿಸಿದ್ದು, ತಮ್ಮನ್ನು ತಾವು 'ಕಾಕ್ರೋಚ್ ಜನತಾ ಪಾರ್ಟಿ'ಯ "ಸಂಸ್ಥಾಪಕ ಅಧ್ಯಕ್ಷ" ಎಂದು ಕರೆದುಕೊಂಡಿದ್ದಾರೆ. ಈ ವೆಬ್‌ಸೈಟ್‌ನ ಅಡಿಕುರಿಯಲ್ಲಿ ಇದು ಕೇವಲ ಒಂದು ರಾಜಕೀಯ ವಿಡಂಬನೆ ಎಂದು ಸ್ಪಷ್ಟಪಡಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಿಜೆಪಿಯ ಪ್ರಣಾಳಿಕೆಯಲ್ಲಿ ಅತ್ಯಂತ ಗಂಭೀರ ಹಾಗೂ ರೋಚಕ ಬೇಡಿಕೆಗಳನ್ನು ಇಡಲಾಗಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿಯಾದ ನಂತರ ಅವರಿಗೆ ನೀಡಲಾಗುವ ರಾಜ್ಯಸಭಾ ಸ್ಥಾನಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಸಂಸತ್ತಿನ ಒಟ್ಟು ಸದಸ್ಯರ ಸಂಖ್ಯೆಯನ್ನು ಹೆಚ್ಚಿಸದೆಯೇ, ಮಹಿಳೆಯರಿಗೆ ಶೇಕಡಾ 50 ರಷ್ಟು ಕಡ್ಡಾಯ ಮೀಸಲಾತಿಯನ್ನು ಜಾರಿಗೆ ತರಬೇಕು. ಪಕ್ಷಾಂತರ ಮಾಡುವ ರಾಜಕಾರಣಿಗಳಿಗ ಬರೋಬ್ಬರಿ 20 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಠಿಣ ನಿಷೇಧ ಹೇರಬೇಕು ಎಂದು ತಿಳಿಸಲಾಗಿದೆ. ಈ ವಿಡಿಯೋದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಡಿಜಿಟಲ್ ವಿದ್ಯಮಾನದ ವಿಶ್ಲೇಷಣೆ ಕುರಿತು ಸಂಪೂರ್ಣ ಮಾಹಿತಿ ಇದ್ದು, ಇದು ಭಾರತದ ಯುವ ಪೀಳಿಗೆಯ ರಾಜಕೀಯ ಆಕ್ರೋಶ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವವನ್ನು ವಿವರಿಸುತ್ತದೆ.