ಉತ್ತರ ಪ್ರದೇಶ : ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ದಿಢೀರ್ ಬೆಳವಣಿಗೆಯೊಂದರಲ್ಲಿ, ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಅಧ್ಯಕ್ಷೆ ಹಾಗೂ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು ಭೇಟಿಯಾಗಲು ಅವರ ಲಕ್ನೋ ನಿವಾಸಕ್ಕೆ ತೆರಳಿದ್ದ ಕಾಂಗ್ರೆಸ್‌ನ ಪ್ರಭಾವಿ ದಲಿತ ನಾಯಕರ ನಿಯೋಗಕ್ಕೆ ತೀವ್ರ ಮುಖಭಂಗವಾಗಿದೆ. ಯಾವುದೇ ಪೂರ್ವ ಅನುಮತಿ ಇಲ್ಲದೆ ಬಂದಿದ್ದ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲು ಮಾಯಾವತಿ ಅವರು ನಿರಾಕರಿಸಿದ್ದು, ನಾಯಕರು ಮನೆಯ ಗೇಟ್‌ನಿಂದಲೇ ವಾಪಸ್ ಹೋಗಿದ್ದಾರೆ. 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಒಂದು ವರ್ಷ ಬಾಕಿ ಇರುವಾಗ ನಡೆದಿರುವ ಈ ಘಟನೆ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಗ್ರಾಸ ಮಾಡಿಕೊಟ್ಟಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಈ ನಾಯಕರಿಗೆ ಬಿಗ್ ಶಾಕ್ ನೀಡಿದೆ.
ಕಾಂಗ್ರೆಸ್ ರಾಷ್ಟ್ರೀಯ ಪರಿಶಿಷ್ಟ ಜಾತಿ (ಎಸ್‌ಸಿ) ವಿಭಾಗದ ಅಧ್ಯಕ್ಷ ರಾಜೇಂದ್ರ ಪಾಲ್ ಗೌತಮ್ ಮತ್ತು ಬಾರಾಬಂಕಿ ಕ್ಷೇತ್ರದ ಲೋಕಸಭಾ ಸಂಸದ ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್ ಎಸ್‌ಸಿ ವಿಭಾಗದ ಅಧ್ಯಕ್ಷ ತನುಜ್ ಪುನಿಯಾ ಅವರು ಯಾವುದೇ ಮುನ್ಸೂಚನೆ ಇಲ್ಲದೆ ಲಕ್ನೋದಲ್ಲಿರುವ ಮಾಯಾವತಿ ಅವರ ನಿವಾಸಕ್ಕೆ ಭೇಟಿ ನೀಡಲು ಆಗಮಿಸಿದ್ದರು. ಕಾಂಗ್ರೆಸ್ ನಾಯಕರು ಭೇಟಿಗೆ ವಿನಂತಿಸಿದಾಗ ಮಾಯಾವತಿ ಅವರ ಭದ್ರತಾ ಸಿಬ್ಬಂದಿ ಒಳಗೆ ಸಂದೇಶ ರವಾನಿಸಿದರು. ಆದರೆ, ತಕ್ಷಣವೇ ಭೇಟಿಗೆ ನಿರಾಕರಿಸಿದ ಮಾಯಾವತಿ, ಒಳಗೆ ಬರಲು ಅವಕಾಶ ನೀಡಲಿಲ್ಲ. ಇದರ ಪರಿಣಾಮವಾಗಿ ಕೈ ನಾಯಕರು ನಿರಾಶರಾಗಿ ಗೇಟ್‌ನಿಂದಲೇ ವಾಪಸ್ ಹಿಂದಿರುಗಬೇಕಾಯಿತು.
ಈ ಬೆಳವಣಿಗೆ ಹರಡುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್ ಹೈಕಮಾಂಡ್, ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದೂರ ಸರಿದಿದೆ. ಕಾಂಗ್ರೆಸ್‌ನ ಉತ್ತರ ಪ್ರದೇಶ ಉಸ್ತುವಾರಿ ಅವಿನಾಶ್ ಪಾಂಡೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಇದು ಪಕ್ಷದ ಅಧಿಕೃತ ನಿಯೋಗವಾಗಿರಲಿಲ್ಲ. ನಾಯಕರ ಈ ಶಿಸ್ತು ಉಲ್ಲಂಘನೆಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದೆ. ಹೈಕಮಾಂಡ್ ಅನುಮತಿ ಇಲ್ಲದೆ ಭೇಟಿಗೆ ಮುಂದಾದ ಇಬ್ಬರೂ ನಾಯಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಕೂಡ ಮಾತನಾಡಿ, ಇಂತಹ ಪ್ರಮುಖ ಭೇಟಿಗಳಿಗೆ ಪಕ್ಷದ ಅಗ್ರ ನಾಯಕತ್ವದಿಂದ ಮೊದಲೇ ಅನುಮತಿ ಪಡೆಯಬೇಕಾಗುತ್ತದೆ, ಆದರೆ ಈ ಭೇಟಿಗೆ ಯಾವುದೇ ಅನುಮತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ವಪಕ್ಷದಿಂದಲೇ ಶೋಕಾಸ್ ನೋಟಿಸ್ ಜಾರಿಯಾಗುತ್ತಿದ್ದಂತೆ ಗಲಿಬಿಲಿಗೊಂಡ ತನುಜ್ ಪುನಿಯಾ ಮತ್ತು ರಾಜೇಂದ್ರ ಪಾಲ್ ಗೌತಮ್ ಜಂಟಿ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಅಥವಾ ಒಕ್ಕೂಟದ ಮಾತುಕತೆ ಇರಲಿಲ್ಲ. ಲಕ್ನೋದಲ್ಲಿ ಪಕ್ಷದ ಸಭೆ ಮುಗಿದ ಬಳಿಕ ಅದೇ ಮಾರ್ಗವಾಗಿ ಹೋಗುತ್ತಿದ್ದಾಗ, ಮಾಯಾವತಿ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಕಾರಣ ಕೇವಲ ಅವರ ಆರೋಗ್ಯ ವಿಚಾರಿಸಲು ಹೋದ ಸೌಜನ್ಯದ ಭೇಟಿಯಾಗಿತ್ತು ಅಷ್ಟೇ. ನಾವು ರಾಹುಲ್ ಗಾಂಧಿ ಅವರ ಯಾವುದೇ ಸಂದೇಶವನ್ನು ಹೊತ್ತು ಅಲ್ಲಿಗೆ ಹೋಗಿರಲಿಲ್ಲ ಎಂದು ನಾಯಕರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.