ಮುಂಬಯಿ: ಇಲ್ಲಿನ ಬಾಂದ್ರಾ ರೈಲು ನಿಲ್ದಾಣದ ಪರಿಸರದಲ್ಲಿ ಪಶ್ಚಿಮ ರೈಲ್ವೆಯು ಅತ್ಯಂತ ಬೃಹತ್ ಮಟ್ಟದ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಈ ವೇಳೆ ತೀವ್ರ ಉದ್ವಿಗ್ನತೆ ಉಂಟಾಗಿದೆ. ಇಲ್ಲಿನ ಕೊಳಚೆ ಪ್ರದೇಶದಲ್ಲಿ ರೈಲ್ವೆ ಜಾಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿದ್ದ ಅಕ್ರಮ ಮಸೀದಿ ಹಾಗೂ ಇತರ ಕಟ್ಟಡಗಳ ಮೇಲೆ ಬುಲ್ಡೋಜರ್ ಚಲಾಯಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮತ್ತು ಅತಿಕ್ರಮಣಕಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಉದ್ರಿಕ್ತ ಹಾವಳಿ ನಡೆಸಿದ ಜನಸಂದಣಿಯು ಪೊಲೀಸರ ಮೇಲೆ ಬಾಟಲಿಗಳು ಹಾಗೂ ದೊಡ್ಡ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿದೆ. ಗಲಭೆಯನ್ನು ನಿಯಂತ್ರಿಸಲು ಮತ್ತು ಜನರನ್ನು ಚದುರಿಸಲು ಪೊಲೀಸರು ತಕ್ಷಣವೇ ಲಾಠಿ ಪ್ರಹಾರ ನಡೆಸಬೇಕಾಯಿತು.
ಸ್ಥಳದಲ್ಲಿ ಹೆಚ್ಚುತ್ತಿರುವ ಜನಸಂದಣಿ ಮತ್ತು ಉದ್ವಿಗ್ನತೆಯನ್ನು ಕಂಡು ಪೊಲೀಸರು ಹೆಚ್ಚಿನ ಭದ್ರತಾ ಪಡೆಗಳನ್ನು ಕರೆಸಿಕೊಂಡಿದ್ದು, ಗಲಭೆ ನಿಯಂತ್ರಣ ಪಡೆಯೂ ಸ್ಥಳಕ್ಕೆ ಧಾವಿಸಿದೆ. ಸತತ ಎರಡನೇ ದಿನವೂ ಈ ಬೃಹತ್ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಇದು ಬಾಂದ್ರಾ ರೈಲ್ವೆ ವ್ಯಾಪ್ತಿಯ ಇತಿಹಾಸದಲ್ಲೇ ನಡೆದ ಅತಿ ದೊಡ್ಡ ಕಾರ್ಯಾಚರಣೆ ಎಂದು ಪರಿಗಣಿಸಲಾಗಿದೆ. ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ವ್ಯಕ್ತಿಯೊಬ್ಬರು ಬಾಂದ್ರಾ ರೈಲು ನಿಲ್ದಾಣದ ಸುತ್ತಮುತ್ತಲಿನ ಕೊಳಚೆ ಪ್ರದೇಶದ ವ್ಯಾಪಕ ಅತಿಕ್ರಮಣದ ವಿಡಿಯೋವನ್ನು ಪ್ರಸಾರ ಮಾಡಿದ್ದರು. ಆ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆಯು ಈ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ.
ಬಾಂದ್ರಾ ರೈಲ್ವೆ ವ್ಯಾಪ್ತಿಯಲ್ಲಿ ಸುಮಾರು ೫ ಸಾವಿರ ಚದರ ಮೀಟರ್‌ನಷ್ಟು ಭೂಮಿ ಅತಿಕ್ರಮಣಕ್ಕೊಳಗಾಗಿದ್ದು, ಅಲ್ಲಿ 500 ಕ್ಕೂ ಹೆಚ್ಚು ಅಕ್ರಮ ಕೊಳೆಗೇರಿಗಳು ತಲೆಎತ್ತಿದ್ದವು. ಕೆಲವು ದಿನಗಳ ಹಿಂದೆ ಕಾರ್ಯಾಚರಣೆ ನಡೆದಾಗ ಅತಿಕ್ರಮಣಕಾರರು ಮುಂಬಯಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಇದಕ್ಕೆ ರಾಜಕೀಯ ಬೆಂಬಲವೂ ಇದ್ದಿದ್ದರಿಂದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಮತ್ತೆ ಕಾರ್ಯಾಚರಣೆ ಆರಂಭವಾಗಿದ್ದು, ಇನ್ನು ಕೆಲವು ದಿನಗಳ ಕಾಲ ಇದು ಮುಂದುವರಿಯಲಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದ ಕುರಿತು ರೈಲ್ವೆ ಅಧಿಕಾರಿಗಳು ಮಾತನಾಡಿ, ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಭವಿಷ್ಯದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅತಿಕ್ರಮಣ ತೆರವುಗೊಳಿಸುವುದು ಅತ್ಯಗತ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರೈಲ್ವೆ ಹಳಿಗಳ ಪಕ್ಕದಲ್ಲೇ ಬೆಳೆದಿರುವ ಕೊಳೆಗೇರಿಗಳಿಂದಾಗಿ ಅಪಘಾತಗಳ ಅಪಾಯವೂ ಹೆಚ್ಚುತ್ತಿದೆ. ಸಂಬಂಧಪಟ್ಟ ಭೂಮಿ ಮುಕ್ತವಾದರೆ 'ಬಾಂದ್ರಾ ಟರ್ಮಿನಸ್' ವಿಸ್ತರಣೆ ಮಾಡಲು ಹಾಗೂ ದೀರ್ಘ ದೂರದ ರೈಲುಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಭವಿಷ್ಯದಲ್ಲಿ ಬಾಂದ್ರಾ ರೈಲು ನಿಲ್ದಾಣವನ್ನು 'ವರ್ಲ್ಡ್ ಕ್ಲಾಸ್ ಟರ್ಮಿನಸ್' (ಜಾಗತಿಕ ದರ್ಜೆಯ ರೈಲು ನಿಲ್ದಾಣ) ಆಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೃಹತ್ ಕಾರ್ಯಾಚರಣೆಯು ಅತ್ಯಂತ ಬಿಗಿ ಭದ್ರತೆಯಲ್ಲಿ ನಡೆಯುತ್ತಿದ್ದು, ಮುಂಬಯಿ ಪೊಲೀಸರ 400 ಅಧಿಕಾರಿಗಳು ಹಾಗೂ ಸಿಬ್ಬಂದಿ, ರೈಲ್ವೆ ಪೊಲೀಸರು ಸೇರಿದಂತೆ ರೈಲ್ವೆ ಸುರಕ್ಷತಾ ಪಡೆಯ 400 ಸೈನಿಕರು ಹಾಗೂ ಪಶ್ಚಿಮ ರೈಲ್ವೆಯ 200 ಪೊಲೀಸರು ಒಳಗೊಂಡಂತೆ ಒಟ್ಟು 1 ಸಾವಿರ ಜನರ ಸಶಸ್ತ್ರ ಪಡೆಯನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ 12 ಜೆಸಿಬಿಗಳು, ಎರಡು ಪೊಕ್ಲೇನ್ ಯಂತ್ರಗಳು ಹಾಗೂ 12 ಟ್ರಕ್‌ಗಳಂತಹ ಬೃಹತ್ ಉಪಕರಣಗಳೊಂದಿಗೆ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಈ ಯಶಸ್ವಿ ಕಾರ್ಯಾಚರಣೆಯಿಂದಾಗಿ ಸುಮಾರು ೬೦0 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯದ ಭೂಮಿಯು ಮತ್ತೆ ಪಶ್ಚಿಮ ರೈಲ್ವೆಯ ವಶಕ್ಕೆ ಬರಲಿದೆ.