ನವದೆಹಲಿ : ಜಾತಿ ಆಧಾರಿತ ಜನಗಣತಿ ನಡೆಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಾಂಚೋಲಿ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶವನ್ನು ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರ ಸುಧಾಕರ್ ಗುಮ್ಮುಲಾ ಅವರು ಖುದ್ದಾಗಿ ಹಾಜರಾಗಿ, ಜಾತಿ ದತ್ತಾಂಶಗಳನ್ನು ಸಂಗ್ರಹಿಸುವುದರಿಂದ ರಾಜಕಾರಣಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ, ಹೀಗಾಗಿ ಜಾತಿ ಗಣತಿ ನಡೆಸಲು ಯಾವುದೇ ಸಮರ್ಥನೆ ಇಲ್ಲ ಎಂದು ವಾದಿಸಿದರು. ಆದರೆ ಈ ವಾದವನ್ನು ಒಪ್ಪದ ಸುಪ್ರೀಂ ಕೋರ್ಟ್ ಪೀಠವು, ಜನಗಣತಿಯು ಜಾತಿ ಆಧಾರಿತವಾಗಿರಬೇಕೇ ಅಥವಾ ಬೇಡವೇ ಎಂಬುದು ಸಂಪೂರ್ಣವಾಗಿ ಸರ್ಕಾರದ ನೀತಿ ನಿರ್ಧಾರಗಳಿಗೆ ಸಂಬಂಧಪಟ್ಟ ವಿಷಯವಾಗಿದೆ ಎಂದು ಸ್ಪಷ್ಟಪಡಿಸಿತು.
ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದ ನ್ಯಾಯಾಲಯ, ಹಿಂದುಳಿದ ವರ್ಗಗಳ ಜನರಿಗೆ ಸೂಕ್ತ ಕಲ್ಯಾಣ ಯೋಜನೆಗಳನ್ನು ಮತ್ತು ಕ್ರಮಗಳನ್ನು ರೂಪಿಸಲು ಆಯಾ ಜಾತಿಗಳಿಗೆ ಸೇರಿದ ವ್ಯಕ್ತಿಗಳ ನಿಖರ ಸಂಖ್ಯೆಯನ್ನು ಸರ್ಕಾರ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿತು. ದೇಶದ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿಯಾಗಲಿರುವ 2027ರ ಜನಗಣತಿಯು ಭಾರತದ 16 ನೇ ರಾಷ್ಟ್ರೀಯ ಜನಗಣತಿಯಾಗಲಿದ್ದು, ಅದರಲ್ಲಿ ಜಾತಿ ಆಧಾರಿತ ದತ್ತಾಂಶ ಸಂಗ್ರಹಣೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದಂತಾಗಿದೆ.