image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬಿಜೆಪಿಯನ್ನೇ ಹಿಂದಿಕ್ಕಿದ 'ಕಾಕ್ರೋಚ್ ಜನತಾ ಪಾರ್ಟಿ': ಸೋಶಿಯಲ್ ಮೀಡಿಯಾದಲ್ಲಿ ಜೆನ್-ಝೀ ಯುವಕರ ಡಿಜಿಟಲ್ ಕ್ರಾಂತಿ

ಬಿಜೆಪಿಯನ್ನೇ ಹಿಂದಿಕ್ಕಿದ 'ಕಾಕ್ರೋಚ್ ಜನತಾ ಪಾರ್ಟಿ': ಸೋಶಿಯಲ್ ಮೀಡಿಯಾದಲ್ಲಿ ಜೆನ್-ಝೀ ಯುವಕರ ಡಿಜಿಟಲ್ ಕ್ರಾಂತಿ

ಮುಂಬೈ : ​ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ 'ಕಾಕ್ರೋಚ್ ಜನತಾ ಪಾರ್ಟಿ' (@cockroachjantaparty) ಎಂಬ ವಿಡಂಬನಾತ್ಮಕ ಖಾತೆಯು ಭಾರೀ ಸಂಚಲನ ಸೃಷ್ಟಿಸುತ್ತಿದೆ. ಇನ್‌ಸ್ಟಾಗ್ರಾಮ್‌ ಪುಟ ಆರಂಭವಾದ ಕೇವಲ ನಾಲ್ಕೇ ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್‌ಗಿಂತಲೂ (1 ಕೋಟಿಗೂ ಅಧಿಕ) ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ಇಡೀ ದೇಶದ ಗಮನ ಸೆಳೆದಿದೆ. ಆಶ್ಚರ್ಯಕರ ಸಂಗತಿಯೆಂದರೆ, ಈ ವರ್ಚುವಲ್ ಪುಟವು ದೇಶದ ಆಡಳಿತಾರೂಢ ಪಕ್ಷವಾದ ಬಿಜೆಪಿಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್‌ ಸಂಖ್ಯೆಯನ್ನೂ ಹಿಂದಿಕ್ಕಿದೆ. ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿ (@bjp4india) 8.7 ಮಿಲಿಯನ್, ಕಾಂಗ್ರೆಸ್ (@incindia) 13.2 ಮಿಲಿಯನ್ ಹಾಗೂ ಆಮ್ ಆದ್ಮಿ ಪಕ್ಷ (@aamaadmiparty) 1.9 ಮಿಲಿಯನ್ ಫಾಲೋವರ್ಸ್ ಹೊಂದಿವೆ.

​ಮೇ 16ರಂದು ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಈ ವಿಡಂಬನಾತ್ಮಕ ಅಭಿಯಾನಕ್ಕೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಯೇ ಪ್ರಮುಖ ಕಾರಣವಾಗಿದೆ. ವಕೀಲರೊಬ್ಬರ ಅರ್ಜಿಯ ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿಗಳು, "ಕೆಲವು ನಿರುದ್ಯೋಗಿ ಯುವಕರು ಜಿರಳೆಗಳ (ಕಾಕ್ರೋಚ್) ರೀತಿ ವರ್ತಿಸುತ್ತಿದ್ದಾರೆ. ಸಮಾಜದಲ್ಲಿ ವ್ಯವಸ್ಥೆಯ ಮೇಲೆ ದಾಳಿ ಮಾಡುವ ಇಂತಹ ಪರಾವಲಂಬಿಗಳು ಇದ್ದಾರೆ. ಅವರಲ್ಲಿ ಕೆಲವರು ಮಾಧ್ಯಮಗಳಲ್ಲಿ, ಇನ್ನು ಕೆಲವರು ಸಾಮಾಜಿಕ ಮಾಧ್ಯಮದಲ್ಲಿದ್ದರೆ, ಇನ್ನು ಕೆಲವರು ಆರ್‌ಟಿಐ ಕಾರ್ಯಕರ್ತರಾಗಿದ್ದಾರೆ" ಎಂದು ಅಸಮಾಧಾನ ಹೊರಹಾಕಿದ್ದರು.

​ನ್ಯಾಯಾಧೀಶರ ಈ ಹೇಳಿಕೆಯಿಂದ ಬೇಸತ್ತ ಯುವ ಸಮುದಾಯ, "ಹೌದು, ನಾವು ಜಿರಳೆಗಳೇ" ಎಂದು ವ್ಯವಸ್ಥೆಯ ವಿರುದ್ಧ ವ್ಯಂಗ್ಯವಾಡಲು ಆರಂಭಿಸಿತು. ಮೊದಲು 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ತಮಾಷೆಯಾಗಿ ಕಮೆಂಟ್ ಮಾಡಲು ಆರಂಭಿಸಿದ ಯುವಕರು, ಮರುದಿನವೇ ಇನ್‌ಸ್ಟಾಗ್ರಾಮ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಹೆಸರಿನಲ್ಲಿ ಖಾತೆ ತೆರೆದರು. ಕೇವಲ 78 ಗಂಟೆಗಳಲ್ಲಿ 3 ಮಿಲಿಯನ್ ದಾಟಿದ್ದ ಫಾಲೋವರ್ಸ್ ಸಂಖ್ಯೆ ಈಗ ರಾಕೆಟ್ ವೇಗದಲ್ಲಿ 10.6 ಮಿಲಿಯನ್ ಗಡಿ ದಾಟಿದೆ.

​"ಯುವಕರಿಂದ, ಯುವಕರಿಗಾಗಿ ಮತ್ತು ಯುವಕರ ರಾಜಕೀಯ ವೇದಿಕೆ" ಎಂಬ ಧ್ಯೇಯವಾಕ್ಯದೊಂದಿಗೆ ಈ ಪೇಜ್ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ, ರಾಜಕೀಯ ಹೊಣೆಗಾರಿಕೆ, ಪದೇ ಪದೇ ನಡೆಯುವ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯುವ ಸಮುದಾಯ ಎದುರಿಸುತ್ತಿರುವ ನೈಜ ಸಮಸ್ಯೆಗಳ ಕುರಿತು ಇದು ಧ್ವನಿ ಎತ್ತುತ್ತಿದೆ. ಕೇವಲ ಮೀಮ್ಸ್ ಹಾಗೂ ವಿಡಂಬನೆಗಳ ಮೂಲಕವೇ ಗಂಭೀರ ವಿಷಯಗಳನ್ನು ಪ್ರಸ್ತಾಪಿಸುತ್ತಿರುವುದರಿಂದ ಲಕ್ಷಾಂತರ ಯುವಕರು ಈ ಪುಟವನ್ನು ಬೆಂಬಲಿಸುತ್ತಿದ್ದಾರೆ. ಇಲ್ಲಿಯವರೆಗೆ ಖಾತೆಯಲ್ಲಿ ಕೇವಲ 56 ಪೋಸ್ಟ್‌ಗಳನ್ನು ಮಾತ್ರ ಮಾಡಲಾಗಿದ್ದು, 'ಯುವಕರ ಶಕ್ತಿಯನ್ನು ಅಂಡರ್‌ಎಸ್ಟಿಮೇಟ್ ಮಾಡಬೇಡಿ' ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಅಭಿಯಾನದ ಎಕ್ಸ್ ಖಾತೆಯು ಕೂಡ 165,000 ಫಾಲೋವರ್ಸ್ ಹೊಂದಿದೆ.

Category
ಕರಾವಳಿ ತರಂಗಿಣಿ