ಪಶ್ಚಿಮ ಬಂಗಾಳ : ದಶಕಗಳಷ್ಟು ಹಳೆಯದಾಗಿರುವ ಗೋಹತ್ಯೆ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪಶ್ಚಿಮ ಬಂಗಾಳದ ನೂತನ ಬಿಜೆಪಿ ಸರ್ಕಾರ ದೃಢ ನಿಶ್ಚಯ ಮಾಡಿದೆ. ಆದರೆ, ಇನ್ನೇನು ಈದ್ ಉಲ್-ಅದ್ಹಾ (ಬಕ್ರೀದ್) ಹಬ್ಬ ಸನಿಹದಲ್ಲಿರುವಾಗಲೇ ಜಾರಿಗೆ ಬರುತ್ತಿರುವ ಈ ನಿಯಮದಿಂದಾಗಿ ರಾಜ್ಯದ ಸಾವಿರಾರು ಕುಟುಂಬಗಳು ಅವಲಂಬಿಸಿರುವ ಗ್ರಾಮೀಣ ಜಾನುವಾರು ಆರ್ಥಿಕತೆಗೆ ಭಾರಿ ಪೆಟ್ಟು ಬೀಳುವ ಭೀತಿ ಎದುರಾಗಿದೆ. ವಿಶೇಷವೆಂದರೆ, ಸರ್ಕಾರದ ಈ ನಿರ್ಧಾರಕ್ಕೆ ಮುಸ್ಲಿಂ ಸಮುದಾಯದವರಿಗಿಂತ ಹೆಚ್ಚಾಗಿ ಸ್ಥಳೀಯ ಹಿಂದೂ ಹೈನುಗಾರರು ಮತ್ತು ಜಾನುವಾರು ಸಾಕಣೆದಾರರಿಂದಲೇ ಈಗ ಅನಿರೀಕ್ಷಿತ ವಿರೋಧ ಹಾಗೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಜಾನುವಾರುಗಳನ್ನು ಕಾನೂನುಬದ್ಧವಾಗಿ ಕಡಿಯುವ ಮುನ್ನ ನಾಗರಿಕ ಸಂಸ್ಥೆಗಳು ಮತ್ತು ಸರ್ಕಾರಿ ಪಶು ವೈದ್ಯರು ಜೊತೆಯಲ್ಲಿಯೇ ಪರಿಶೀಲಿಸಿ ನೀಡುವ "ಹತ್ಯೆಗೆ ಯೋಗ್ಯ" ಎಂಬ ಪ್ರಮಾಣಪತ್ರ ಹೊಂದುವುದನ್ನು ಕಡ್ಡಾಯಗೊಳಿಸಿರುವ '1950ರ ಪಶ್ಚಿಮ ಬಂಗಾಳ ಪ್ರಾಣಿ ಹತ್ಯೆ ನಿಯಂತ್ರಣ ಕಾಯ್ದೆ'ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರವು ಕಳೆದ ವಾರವಷ್ಟೇ ಪುನರುಚ್ಚರಿಸಿದೆ. ಈ ಹೊಸ ಅಧಿಸೂಚನೆಯು ರಾಜ್ಯದಲ್ಲಿ ಜಾನುವಾರು ಮತ್ತು ಎಮ್ಮೆಗಳ ಸಾಗಣೆ ಹಾಗೂ ಸಾರ್ವಜನಿಕ ಹತ್ಯೆಯ ಮೇಲಿನ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.
ಹಬ್ಬಕ್ಕೆ ಇನ್ನು ಕೆಲವೇ ವಾರಗಳು ಬಾಕಿ ಇರುವಾಗ ಸರ್ಕಾರ ತೆಗೆದುಕೊಂಡಿರುವ ಈ ದಿಢೀರ್ ಕ್ರಮವು ದಕ್ಷಿಣ 24 ಪರಗಣ, ನಾದಿಯಾ, ಮುರ್ಷಿದಾಬಾದ್ ಮತ್ತು ಬೀರ್ಭೂಮ್ನಂತಹ ಪ್ರಮುಖ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ತೀವ್ರ ಆತಂಕ ಮೂಡಿಸಿದೆ. ಇಲ್ಲಿನ ಸಣ್ಣ ಹೈನುಗಾರರು ತಮ್ಮ ಜಾನುವಾರುಗಳ ದೈನಂದಿನ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಮತ್ತು ಹೊಸ ಜಾನುವಾರುಗಳನ್ನು ಖರೀದಿಸಲು ಹಬ್ಬದ ಸಂದರ್ಭದಲ್ಲಿ ವಯಸ್ಸಾದ ಅಥವಾ ಹಾಲು ಕೊಡದ ಗೊಡ್ಡು ಜಾನುವಾರುಗಳನ್ನು ಮಾರಾಟ ಮಾಡುವುದನ್ನು ರೂಢಿಸಿಕೊಂಡಿದ್ದರು. ಈಗ ಹೊಸ ನಿಯಮಾವಳಿಗಳು ಈ ಇಡೀ ಈದ್ ಜಾನುವಾರು ವ್ಯಾಪಾರಕ್ಕೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿವೆ.
ಸರ್ಕಾರದ ಈ ನೀತಿಯ ವಿರುದ್ಧ ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್ ಪ್ರದೇಶದ ಬಾಮನ್ಗಾಚಿಯ ಜಾನುವಾರು ಸಾಕಣೆದಾರ ಶಶಾಂಕ ಮಂಡಲ್ ಆಕ್ರೋಶ ವ್ಯಕ್ತಪಡಿಸಿದ್ದು, "ಸರ್ಕಾರಕ್ಕೆ ಜಾನುವಾರು ಅರ್ಥ ವ್ಯವಸ್ಥೆಯ ಬಗ್ಗೆ ಯಾವುದೇ ಕಲ್ಪನೆ ಇಲ್ಲ. ಒಂದು ವೇಳೆ ಅವರಿಗೆ ಕಲ್ಪನೆ ಇದ್ದಿದ್ದರೆ 1950ರ ಕಾಯ್ದೆಯನ್ನು ಜಾರಿಗೊಳಿಸುವ ಮುನ್ನ ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಕಾಲಾವಕಾಶ ನೀಡುತ್ತಿದ್ದರು. ನಾವು ಜಾನುವಾರುಗಳ ವಯಸ್ಸು ಮತ್ತು ಗಾತ್ರಕ್ಕೆ ಅನುಗುಣವಾಗಿ ಪ್ರತಿದಿನ 200 ರಿಂದ 300 ರೂಪಾಯಿಗಳನ್ನು ಅವುಗಳ ಮೇವಿಗಾಗಿ ಖರ್ಚು ಮಾಡುತ್ತೇವೆ. ಹಸುಗಳು ಸಾಮಾನ್ಯವಾಗಿ 14 ವರ್ಷಗಳ ತನಕ ಮಾತ್ರ ಬದುಕುತ್ತವೆ. ಆದರೆ ಜಾನುವಾರುಗಳನ್ನು ಮಾರಾಟ ಮಾಡಲು ಕನಿಷ್ಠ 14 ವರ್ಷ ವಯಸ್ಸಾಗಿರುವುದು ಕಡ್ಡಾಯ ಎಂದು ಸರ್ಕಾರ ಹೇಳುತ್ತದೆ. ಅದಕ್ಕಿಂತ ಮುಂಚೆಯೇ ಹಾಲು ಕೊಡುವುದನ್ನು ನಿಲ್ಲಿಸಿದ ಜಾನುವಾರುಗಳನ್ನು ನಾವು ಇಟ್ಟುಕೊಂಡು ಏನು ಮಾಡಬೇಕು? ಪ್ರತಿ ವರ್ಷ ಈದ್ ಸಂದರ್ಭದಲ್ಲಿ ನಾವು ಇಂತಹ ವಯಸ್ಸಾದ ಜಾನುವಾರುಗಳನ್ನು ಮಾರಾಟ ಮಾಡುತ್ತೇವೆ ಮತ್ತು ಆ ಹಣದ ಒಂದು ಭಾಗವನ್ನು ಹೊಸ ಹಸುಗಳನ್ನು ಖರೀದಿಸಲು ಮರುಹೂಡಿಕೆ ಮಾಡುತ್ತೇವೆ" ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರಸ್ತುತ ಕಾನೂನಿನ ಪ್ರಕಾರ, ಜಾನುವಾರುಗಳಿಗೆ 14 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಾಗಿದ್ದು, ಅವು ಕೆಲಸಕ್ಕೆ ಅಥವಾ ಸಂತಾನೋತ್ಪತ್ತಿಗೆ ಅಯೋಗ್ಯವಾಗಿವೆ ಎಂದು ಅಥವಾ ಗಾಯ, ವಿಕಲಾಂಗತೆ ಅಥವಾ ಗುಣಪಡಿಸಲಾಗದ ಕಾಯಿಲೆಯಿಂದ ಶಾಶ್ವತವಾಗಿ ಅಸಮರ್ಥವಾಗಿವೆ ಎಂದು ಪಶು ವೈದ್ಯಾಧಿಕಾರಿಗಳು ಲಿಖಿತ ಪ್ರಮಾಣಪತ್ರ ನೀಡಿದರೆ ಮಾತ್ರ ಅವುಗಳನ್ನು ಹತ್ಯೆ ಮಾಡಲು ಅವಕಾಶವಿರುತ್ತದೆ. ಇದರಿಂದಾಗಿ ಹೈನುಗಾರಿಕೆಯನ್ನು ನಂಬಿಕೊಂಡಿರುವ ಗ್ರಾಮೀಣ ಹಿಂದೂ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದ್ದು, ನೂತನ ಸರ್ಕಾರಕ್ಕೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.