ಮುಂಬೈ : ಔಷಧಗಳ ಆನ್‌ಲೈನ್ ಮಾರಾಟ ಮತ್ತು ಕಾರ್ಪೊರೇಟ್ ಕಂಪನಿಗಳ ಅನಾರೋಗ್ಯಕರ ಸ್ಪರ್ಧೆಯನ್ನು ವಿರೋಧಿಸಿ ಮೇ 20 ರಂದು ದೇಶಾದ್ಯಂತ 24 ಗಂಟೆಗಳ ಕಾಲ ಮೆಡಿಕಲ್ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. 'ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್' (AIOCD) ಮತ್ತು 'ಕರ್ನಾಟಕ ರಾಜ್ಯ ಕೆಮಿಸ್ಟ್ಸ್ ಮತ್ತು ಡ್ರಗಿಸ್ಟ್ಸ್ ಅಸೋಸಿಯೇಶನ್' (KCDA) ಜಂಟಿಯಾಗಿ ಈ ಬೃಹತ್ ಮುಷ್ಕರಕ್ಕೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ 26,000ಕ್ಕೂ ಹೆಚ್ಚು ಶಾಪ್‌ಗಳು ಸೇರಿದಂತೆ ರಾಜ್ಯ ಹಾಗೂ ದೇಶಾದ್ಯಂತ ಲಕ್ಷಾಂತರ ಔಷಧ ವ್ಯಾಪಾರ ಸಂಸ್ಥೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದು, ವ್ಯಾಪಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಮುಷ್ಕರದ ಅವಧಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಮಗೆ ಅಗತ್ಯವಿರುವ ತುರ್ತು ಮತ್ತು ಜೀವ ರಕ್ಷಕ ಔಷಧಗಳನ್ನು ಮುಂಚಿತವಾಗಿಯೇ ಖರೀದಿಸಿಟ್ಟುಕೊಳ್ಳುವಂತೆ ಔಷಧ ವ್ಯಾಪಾರಸ್ಥರ ಸಂಘವು ಗ್ರಾಹಕರಲ್ಲಿ ವಿಶೇಷ ಮನವಿ ಮಾಡಿದೆ.
ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಕೇಂದ್ರ ಸರ್ಕಾರವು ಇ-ಪೋರ್ಟಲ್‌ಗಳ ಮೂಲಕ ಆನ್‌ಲೈನ್ ವೇದಿಕೆಗಳಲ್ಲಿ ಔಷಧ ಮಾರಾಟಕ್ಕೆ ತಾತ್ಕಾಲಿಕ ಅನುಮತಿ ನೀಡಿತ್ತು. ಆದರೆ ಪ್ರಸ್ತುತ ಆನ್‌ಲೈನ್ ಫಾರ್ಮಸಿಗಳು ಮತ್ತು ದೊಡ್ಡ ಕಾರ್ಪೊರೇಟ್ ಕಂಪನಿಗಳು ಭಾರಿ ರಿಯಾಯಿತಿ (ಡಿಸ್ಕೌಂಟ್) ದರದಲ್ಲಿ ಮನೆಗೇ ಔಷಧಗಳನ್ನು ತಲುಪಿಸುತ್ತಿರುವುದರಿಂದ, ತಲೆಮಾರುಗಳಿಂದ ನಂಬಿಕಸ್ಥ ಸೇವೆಯನ್ನು ನೀಡುತ್ತಾ ಬಂದಿರುವ ಸಾಂಪ್ರದಾಯಿಕ ಮತ್ತು ಸ್ಥಳೀಯ ಸಣ್ಣ ಔಷಧ ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರೊಂದಿಗೆ ಇ-ಪೋರ್ಟಲ್‌ಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು, ನಕಲಿ ವೈದ್ಯರ ಪ್ರಿಸ್ಕ್ರಿಪ್ಷನ್‌ಗಳನ್ನು ಸೃಷ್ಟಿಸಿ ಆಯಂಟಿಬಯಾಟಿಕ್ ಹಾಗೂ ವ್ಯಸನಕ್ಕೆ ಕಾರಣವಾಗುವ ಅಪಾಯಕಾರಿ ಔಷಧಗಳನ್ನು ಸುಲಭವಾಗಿ ವಿತರಿಸಲಾಗುತ್ತಿದೆ ಎಂದು ವ್ಯಾಪಾರಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದು ದೇಶದ ಯುವ ಪೀಳಿಗೆಯನ್ನು ತಪ್ಪು ದಾರಿಗೆ ಮತ್ತು ದುಶ್ಚಟಗಳಿಗೆ ತಳ್ಳುವ ದೊಡ್ಡ ಆತಂಕವನ್ನು ಸೃಷ್ಟಿಸಿದೆ.
ಔಷಧಗಳು ಸಾಮಾನ್ಯ ಗ್ರಾಹಕ ವಸ್ತುಗಳಲ್ಲದ ಕಾರಣ, ಅವುಗಳನ್ನು ಕಡ್ಡಾಯವಾಗಿ ಅರ್ಹ ಫಾರ್ಮಾಸಿಸ್ಟ್‌ಗಳ ಸಮ್ಮುಖದಲ್ಲಿ ಸುರಕ್ಷತಾ ನಿಯಮಗಳೊಂದಿಗೆ ನೀಡಬೇಕು ಎನ್ನುವುದು ಕಾಯ್ದೆಯಾಗಿದೆ. ಆದರೆ ಆನ್‌ಲೈನ್ ಮಾರಾಟ ಪ್ರಕ್ರಿಯೆಯಲ್ಲಿ ಇಂತಹ ಯಾವುದೇ ಕಟ್ಟುನಿಟ್ಟಿನ ನಿಯಮಗಳು ಪಾಲನೆಯಾಗುತ್ತಿಲ್ಲ. ಸ್ಥಳೀಯ ಅಂಗಡಿಗಳು ಯಾರಿಗೆ, ಎಷ್ಟು ಔಷಧ ಮಾರಾಟ ಮಾಡಿದ್ದೇವೆ ಎಂಬ ನಿಖರ ಮಾಹಿತಿಯನ್ನು ಸರ್ಕಾರಕ್ಕೆ ನಿಯಮಿತವಾಗಿ ನೀಡುತ್ತವೆ, ಆದರೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಇಂತಹ ಯಾವುದೇ ಪಾರದರ್ಶಕ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ ಎಂದು ಸಂಘಟನೆಗಳು ಆರೋಪಿಸಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಆರ್ 817 ಹಾಗೂ ಕೋವಿಡ್ ಅವಧಿಯಲ್ಲಿ ತರಲಾಗಿದ್ದ ನಿಯಮಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಕಾರ್ಪೊರೇಟ್ ಕಂಪನಿಗಳ ತೀವ್ರ ರಿಯಾಯಿತಿ ತಡೆಗಟ್ಟಲು ಎಲ್ಲರಿಗೂ ಸಮಾನ ಅವಕಾಶ ನೀಡುವ ‘ಲೆವೆಲ್ ಪ್ಲೇಯಿಂಗ್ ಫೀಲ್ಡ್’ ನೀತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಮೇ 20 ರಂದು ಔಷಧ ಅಂಗಡಿಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಸಲಾಗುತ್ತಿದ್ದು, ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ವ್ಯಾಪಾರಿಗಳು ಎಚ್ಚರಿಕೆ ನೀಡಿದ್ದಾರೆ.