ನವದೆಹಲಿ : ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದ 'ಜಿಹಾದಿ ಡ್ರಗ್' ಎಂದೇ ಕುಖ್ಯಾತಿ ಪಡೆದಿರುವ 'ಕ್ಯಾಪ್ಟಾಗನ್' ಮಾದಕ ವಸ್ತುವನ್ನು ಕೇಂದ್ರ ಗೃಹ ಸಚಿವಾಲಯ ಜಪ್ತಿ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಶನಿವಾರ ಈ ಮಹತ್ವದ ಕಾರ್ಯಾಚರಣೆಯನ್ನು ಪ್ರಕಟಿಸಿದ್ದು, ಅಮಲೇರಿಸುವ ದಂಧೆಯ ವಿರುದ್ಧ ನಡೆಸಲಾದ ಈ ಬೃಹತ್ ಆಯಂಟಿ-ನಾರ್ಕೋಟಿಕ್ಸ್ 'ಆಪರೇಷನ್ ರೇಜ್‌ಪಿಲ್' ಮೂಲಕ ಬರೋಬ್ಬರಿ 182 ಕೋಟಿ ರೂಪಾಯಿ ಮೌಲ್ಯದ ಭಯಾನಕ ಜಿಹಾದಿ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೆಸೆಯಲಾಗಿದೆ. ಮಾದಕ ವಸ್ತುಗಳ ಅಂತಾರರಾಷ್ಟ್ರೀಯ ಜಾಲದ ವಿರುದ್ಧ ಕೇಂದ್ರ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಈ ಕಾರ್ಯಾಚರಣೆ ದೊಡ್ಡ ಯಶಸ್ಸು ತಂದುಕೊಟ್ಟಿದೆ ಎಂದು ಗೃಹ ಸಚಿವ ಅಮಿತ್ ಷಾ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.
ಮೋದಿ ಸರ್ಕಾರವು 'ಮಾದಕ ಮುಕ್ತ ಭಾರತ' ನಿರ್ಮಾಣಕ್ಕೆ ಬದ್ಧವಾಗಿದೆ. ನಮ್ಮ ತನಿಖಾ ಸಂಸ್ಥೆಗಳು ನಡೆಸಿದ 'ಆಪರೇಷನ್ ರೇಜ್‌ಪಿಲ್' ಮೂಲಕ ದೇಶದಲ್ಲೇ ಮೊದಲ ಬಾರಿಗೆ 182 ಕೋಟಿ ರೂಪಾಯಿ ಮೌಲ್ಯದ ಭೀಕರ 'ಜಿಹಾದಿ ಡ್ರಗ್' ಎಂದೇ ಕರೆಯಲ್ಪಡುವ ಕ್ಯಾಪ್ಟಾಗನ್ ಅನ್ನು ಜಪ್ತಿ ಮಾಡಿ ಮಹತ್ತರ ಸಾಧನೆ ಮಾಡಿವೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ ಎಂದು ಅಮಿತ್ ಷಾ ಅವರು ಬರೆದುಕೊಂಡಿದ್ದಾರೆ. ಈ ಬೃಹತ್ ಕಾರ್ಯಾಚರಣೆಯ ವೇಳೆ ಭದ್ರತಾ ಸಂಸ್ಥೆಗಳು ಬರೋಬ್ಬರಿ 227.7 ಕೆಜಿ ತೂಕದ ಕ್ಯಾಪ್ಟಾಗನ್ ಮಾತ್ರೆಗಳು ಹಾಗೂ ಪೌಡರ್ ಅನ್ನು ವಶಪಡಿಸಿಕೊಂಡಿದ್ದು, ಅಂತಾರಾಷ್ಟ್ರೀಯ ಮಾದಕ ವಸ್ತು ಸಾಗಣೆ ಜಾಲಕ್ಕೆ ಲಿಂಕ್ ಹೊಂದಿದ್ದ ಸಿರಿಯಾ ಮೂಲದ ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೃಹ ಸಚಿವ ಅಮಿತ್ ಷಾ ಅವರ ಪ್ರಕಾರ, ಜಪ್ತಿ ಮಾಡಲಾದ ಈ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ಮಧ್ಯಪ್ರಾಚ್ಯ ದೇಶಗಳಿಗೆ ಸಾಗಿಸಲು ಸಂಚು ರೂಪಿಸಲಾಗಿತ್ತು. ಮಧ್ಯಪ್ರಾಚ್ಯಕ್ಕೆ ಸಾಗಿಸಬೇಕಿದ್ದ ಡ್ರಗ್ಸ್ ಜಾಲವನ್ನು ಭೇದಿಸಿರುವುದು ಮತ್ತು ವಿದೇಶಿ ಪ್ರಜೆಯನ್ನು ಬಂಧಿಸಿರುವುದು ಮಾದಕ ವಸ್ತುಗಳ ವಿರುದ್ಧ ನಮ್ಮ ಸರ್ಕಾರ ಹೊಂದಿರುವ 'ಝೀರೋ ಟಾಲರೆನ್ಸ್' ನೀತಿಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಷಾ ಹೇಳಿದ್ದಾರೆ.
ಇದೇ ವೇಳೆ, ಭಾರತವನ್ನು ಕೇವಲ ಟ್ರಾನ್ಸಿಟ್ ಪಾಯಿಂಟ್ ಆಗಿ ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ಸಾಗಿಸುವವರ ವಿರುದ್ಧ ಕಠಿಣ ಎಚ್ಚರಿಕೆ ನೀಡಿರುವ ಅಮಿತ್ ಷಾ, "ನಮ್ಮ ದೇಶದ ಭೂಪ್ರದೇಶವನ್ನು ಬಳಸಿಕೊಂಡು ಭಾರತದೊಳಗೆ ಪ್ರವೇಶಿಸುವ ಅಥವಾ ಇಲ್ಲಿಂದ ಹೊರಹೋಗುವ ಪ್ರತಿಯೊಂದು ಗ್ರಾಂ ಮಾದಕ ವಸ್ತುವಿನ ಮೇಲೂ ನಾವು ಕಠಿಣ ನಿಗಾ ಇಡಲಿದ್ದೇವೆ ಮತ್ತು ಇಂತಹ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕಲಿದ್ದೇವೆ. ಈ ದಿಟ್ಟ ಕಾರ್ಯಾಚರಣೆ ನಡೆಸಿದ ಎನ್‌ಸಿಬಿ ಅಧಿಕಾರಿಗಳ ಜಾಗರೂಕತೆ ಹಾಗೂ ಶೌರ್ಯಕ್ಕೆ ನನ್ನ ಸಲಾಂ ಎಂದು ಶ್ಲಾಘಿಸಿದ್ದಾರೆ. ಕ್ಯಾಪ್ಟಾಗನ್ ಎಂಬುದು ಮೂಲತಃ 'ಫೆನೆಥೈಲಿನ್' ಎಂಬ ಸಿಂಥೆಟಿಕ್ ಸ್ಟಿಮ್ಯುಲಂಟ್‌ನ ಬೀದಿ ಹೆಸರಾಗಿದೆ. ಇದನ್ನು ಆರಂಭದಲ್ಲಿ 1960ರ ದಶಕದಲ್ಲಿ ಮಕ್ಕಳಲ್ಲಿನ ಗಮನದ ಕೊರತೆಯ ಅಸ್ವಸ್ಥತೆ ಮತ್ತು ಅತಿಯಾದ ನಿದ್ರೆಯ ಸಮಸ್ಯೆಯಾದ 'ನಾರ್ಕೊಲೆಪ್ಸಿ' ನಿವಾರಣೆಗೆ ಚಿಕಿತ್ಸೆ ನೀಡಲು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಈ ಮಾದಕ ವಸ್ತುವು ಮನುಷ್ಯನನ್ನು ತೀವ್ರವಾಗಿ ವ್ಯಸನಕ್ಕೆ ತಳ್ಳುವ ಗುಣ ಹೊಂದಿದ್ದರಿಂದ, ನಂತರದ ದಿನಗಳಲ್ಲಿ ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಯಿತು.