ಮಧ್ಯಪ್ರದೇಶ : ಭೋಜ್‌ಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣವನ್ನು ಸರಸ್ವತಿ ದೇವಾಲಯವೆಂದು ಇತ್ತೀಚೆಗೆ ಮಧ್ಯಪ್ರದೇಶ ಹೈಕೋರ್ಟ್ ನೀಡಿರುವ ತೀರ್ಪು ತಮಗೆ ತೃಪ್ತಿ ತಂದಿಲ್ಲ ಮತ್ತು ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಸ್ಪಷ್ಟಪಡಿಸಿದೆ. ಹೈಕೋರ್ಟ್‌ನ ಈ ಆದೇಶವನ್ನು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಮಂಡಳಿಯು ಪ್ರಕಟಿಸಿದೆ.
ಮಧ್ಯಪ್ರದೇಶ ಹೈಕೋರ್ಟ್ ನೀಡಿರುವ ಈ ಇತ್ತೀಚಿನ ತೀರ್ಪು ಐತಿಹಾಸಿಕ ಸಂಗತಿಗಳು, ಅಧಿಕೃತ ದಾಖಲೆಗಳು, ಪುರಾತತ್ವ ಇಲಾಖೆಯ ಪುರಾವೆಗಳು ಹಾಗೂ ಸ್ವತಃ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆಯ (ASI) ಹಿಂದಿನ ಅಧಿಕೃತ ನಿಲುವಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಮಂಡಳಿಯು ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕಮಲ್ ಮೌಲಾ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲಿದ್ದು, ಮಂಡಳಿಯು ಈ ಹೋರಾಟಕ್ಕೆ ಸಾಧ್ಯವಿರುವ ಎಲ್ಲಾ ರೀತಿಯ ಕಾನೂನು ಹಾಗೂ ನೈತಿಕ ಬೆಂಬಲವನ್ನು ನೀಡಲಿದೆ ಎಂದು ತಿಳಿಸಿದೆ.
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಮಂಡಳಿಯ ವಕ್ತಾರ ಡಾ.ಎಸ್.ಕ್ಯೂ.ಆರ್. ಇಲ್ಯಾಸ್ ಅವರು, ಐತಿಹಾಸಿಕ ಪುರಾವೆಗಳು, ಕಂದಾಯ ಇಲಾಖೆಯ ಅಧಿಕೃತ ದಾಖಲೆಗಳು ಮತ್ತು ಶತಮಾನಗಳಷ್ಟು ಹಳೆಯದಾದ ಮುಸ್ಲಿಂ ಧಾರ್ಮಿಕ ಸಂಬಂಧವನ್ನು ಸಂಪೂರ್ಣವಾಗಿ ಕಡೆಗಣಿಸಿ ಹೈಕೋರ್ಟ್ ಈ ತೀರ್ಪನ್ನು ನೀಡಿದೆ. ಈ ತೀರ್ಪು ದೇಶದ ಪ್ರಮುಖ ಕಾನೂನಾದ 1991ರ ಪೂಜಾ ಸ್ಥಳಗಳ ಕಾಯ್ದೆಯ ಆಶಯ ಮತ್ತು ಸಾಂವಿಧಾನಿಕ ಆದೇಶಕ್ಕೂ ನೇರ ವಿರುದ್ಧವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಈ ಹಿಂದೆ ಈ ಸ್ಥಳದ ಧಾರ್ಮಿಕ ಸ್ವರೂಪವನ್ನು ಮುಕ್ತವಾಗಿ ಒಪ್ಪಿಕೊಂಡಿತ್ತು. ದಶಕಗಳಿಂದ ಎಎಸ್‌ಐನ ಅಧಿಕೃತ ದಾಖಲೆಗಳು ಮತ್ತು ಅಲ್ಲಿನ ಸೂಚನಾ ಫಲಕಗಳು ಈ ಸ್ಥಳವನ್ನು 'ಭೋಜ್‌ಶಾಲಾ / ಕಮಲ್ ಮೌಲಾ ಮಸೀದಿ' ಎಂದೇ ಜಂಟಿಯಾಗಿ ಬಣ್ಣಿಸುತ್ತಾ ಬಂದಿವೆ. ಇದು ಆ ಸ್ಥಳದ ಧಾರ್ಮಿಕ ಸ್ವರೂಪಕ್ಕೆ ಸಿಕ್ಕ ಅಧಿಕೃತ ಮಾನ್ಯತೆಯಾಗಿದೆ. ಇದಲ್ಲದೆ, 2003ರ ಆಡಳಿತಾತ್ಮಕ ವ್ಯವಸ್ಥೆಯ ಅನ್ವಯ ಹಿಂದೂಗಳಿಗೆ ಮಂಗಳವಾರ ಪೂಜೆ ಸಲ್ಲಿಸಲು ಮತ್ತು ಮುಸ್ಲಿಮರಿಗೆ ಶುಕ್ರವಾರ ಪ್ರಾರ್ಥನೆ (ನಮಾಜ್) ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಹಿಂದಿನ ವ್ಯವಸ್ಥೆಯು ಎರಡೂ ಸಮುದಾಯಗಳ ಐತಿಹಾಸಿಕ ಹಕ್ಕುಗಳು ಮತ್ತು ಪೂಜಾ ಹಕ್ಕುಗಳಿಗೆ ಎಎಸ್‌ಐ ನೀಡಿದ್ದ ಮಾನ್ಯತೆಯನ್ನು ಸ್ಪಷ್ಟಪಡಿಸುತ್ತದೆ. ಆದರೆ ಈಗಿನ ಹೈಕೋರ್ಟ್ ನಿರ್ಧಾರವು ಎಎಸ್‌ಐನ ಈ ಹಿಂದಿನ ಎಲ್ಲಾ ನಿಲುವುಗಳನ್ನು ಗಾಳಿಗೆ ತೂರಿದೆ ಎಂದು ಅವರು ವಾದಿಸಿದ್ದಾರೆ.
ಐತಿಹಾಸಿಕ ಕಂದಾಯ ದಾಖಲೆಗಳು ಆ ರಚನೆಯನ್ನು ಸದಾ ಮಸೀದಿ ಎಂದೇ ಗುರುತಿಸುತ್ತಾ ಬಂದಿವೆ ಎಂದು ಮುಸ್ಲಿಂ ಪರ ವಕೀಲರು ನ್ಯಾಯಾಲಯದ ಮುಂದೆ ಬಲವಾದ ವಾದ ಮಂಡಿಸಿದ್ದರು. ಆದರೆ ರಾಜ ಭೋಜನ ಕಾಲದ ಸರಸ್ವತಿ ದೇವಸ್ಥಾನವು ಇದೇ ನಿಖರ ಸ್ಥಳದಲ್ಲಿದೆ ಎಂದು ಹೇಳಲು ಯಾವುದೇ ನಿರ್ಣಾಯಕ ಐತಿಹಾಸಿಕ ಪುರಾವೆಗಳಿಲ್ಲ. ದುರದೃಷ್ಟವಶಾತ್, ನ್ಯಾಯಾಲಯವು ಈ ಅಧಿಕೃತ ಐತಿಹಾಸಿಕ ಮತ್ತು ಕಂದಾಯ ದಾಖಲೆಗಳಿಗೆ ಸೂಕ್ತ ಪ್ರಾಮುಖ್ಯತೆಯನ್ನು ನೀಡಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಇಲ್ಯಾಸ್ ಆಪಾದಿಸಿದ್ದಾರೆ.
ಇನ್ನು ಎಎಸ್‌ಐ ತನ್ನ ಇತ್ತೀಚಿನ ಸಮೀಕ್ಷಾ ವರದಿಯಲ್ಲಿ ಕೆಲವು ಕಂಬಗಳು, ಕೆತ್ತನೆಗಳು ಮತ್ತು ವಾಸ್ತುಶಿಲ್ಪದ ಅಂಶಗಳನ್ನು ದೇವಾಲಯದ ಪುರಾವೆಗಳಾಗಿ ಉಲ್ಲೇಖಿಸಿರುವುದನ್ನು ಮಂಡಳಿ ಪ್ರಶ್ನಿಸಿದೆ. ಅನೇಕ ಮಧ್ಯಕಾಲೀನ ಇಸ್ಲಾಮಿಕ್ ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ ಹಿಂದಿನ ಹಳೆಯ ನಿರ್ಮಾಣಗಳ ವಸ್ತುಗಳನ್ನು ಮರುಬಳಕೆ ಮಾಡಲಾಗುತ್ತಿತ್ತು ಎಂಬ ಐತಿಹಾಸಿಕ ಸತ್ಯವನ್ನು ಗಮನದಲ್ಲಿಡಬೇಕು. ಕೇವಲ ಕೆಲವು ಇಸ್ಲಾಮೇತರ ವಾಸ್ತುಶಿಲ್ಪದ ಅವಶೇಷಗಳು ಪತ್ತೆಯಾದ ತಕ್ಷಣವೇ, ಶತಮಾನಗಳಷ್ಟು ಹಳೆಯ ಮಸೀದಿಯ ಕಾನೂನಾತ್ಮಕ ಸ್ಥಾನಮಾನವನ್ನು ಸಂಪೂರ್ಣವಾಗಿ ಅಳಿಸಿ ಹಾಕುವುದು ಸರಿಯಲ್ಲ. ಹಿಂದಿನ ನಿರ್ಮಾಣದ ಕೆಲವು ಅವಶೇಷಗಳು ಪತ್ತೆಯಾಗುವುದನ್ನು ಆ ಸ್ಥಳದ ಧಾರ್ಮಿಕ ಗುರುತಿನ ಅಂತಿಮ ಸಾಕ್ಷ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಲಯವು ರಾಜಾ ಭೋಜನಿಗೆ ಸಂಬಂಧಿಸಿದ ಪರಂಪರೆಗಳು, ಸಂಸ್ಕೃತ ಅಧ್ಯಯನದ ಐತಿಹಾಸಿಕ ಹಿನ್ನೆಲೆ ಹಾಗೂ ಪುರಾತತ್ವ ಇಲಾಖೆಯ ಇತ್ತೀಚಿನ ಸಮೀಕ್ಷಾ ವರದಿಗಳಿಗೆ ಮಾತ್ರ ಅತಿಯಾದ ಮಹತ್ವ ನೀಡಿದೆ. ಆದರೆ ದೀರ್ಘಕಾಲದ ನಿರಂತರ ಧಾರ್ಮಿಕ ಬಳಕೆ, ಅಧಿಕೃತ ದಾಖಲೆಗಳು ಹಾಗೂ ಸಾಂವಿಧಾನಿಕ ತತ್ವಗಳನ್ನು ಕಡೆಗಣಿಸಿದೆ. ಹೈಕೋರ್ಟ್‌ನ ಈ ತೀರ್ಪು ಕೇವಲ ಪುರಾತನ ದೇವಾಲಯ ಮತ್ತು ನಾಗರಿಕತೆಯ ನಿರೂಪಣೆಗೆ ಮಾತ್ರ ಪ್ರಾಮುಖ್ಯತೆ ನೀಡಿದಂತಿದೆ. ಆದರೆ ಮಸೀದಿಯ ಶತಮಾನಗಳಷ್ಟು ಹಳೆಯ ಸ್ಥಾನಮಾನ, ಅಧಿಕೃತ ಕಂದಾಯ ದಾಖಲೆಗಳು ಹಾಗೂ ಸ್ವಾತಂತ್ರ್ಯದ ನಂತರದ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ಸಂರಕ್ಷಿಸುವ ಸಾಂವಿಧಾನಿಕ ಬದ್ಧತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಹೀಗಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಸುಪ್ರೀಂ ಕೋರ್ಟ್‌ನಲ್ಲಿ ಈ ತೀರ್ಪನ್ನು ಪ್ರಶ್ನಿಸುವ ನಿರ್ಧಾರಕ್ಕೆ ಬದ್ಧವಾಗಿದ್ದು, ಕಮಲ್ ಮೌಲಾ ಮಸೀದಿ ಸಮಿತಿಗೆ ಬೇಕಾದ ಎಲ್ಲಾ ಕಾನೂನು ನೆರವನ್ನು ಒದಗಿಸಲಿದೆ ಎಂದು ಡಾ. ಇಲ್ಯಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.