ಮುಂಬೈ : ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ ಹೈ-ವೋಲ್ಟೇಜ್ ಆಕ್ಷನ್ ಥ್ರಿಲ್ಲರ್ 'ಧುರಂಧರ್: ದಿ ರಿವೆಂಜ್' (ಧುರಂಧರ್ 2) ಚಿತ್ರವು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿದ್ದಂತೆ ನೆರೆದೇಶ ಪಾಕಿಸ್ತಾನದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಮೇ 15 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ನೆಟ್‌ಫ್ಲಿಕ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು, ಪಾಕಿಸ್ತಾನಿ ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಿದ್ದರಿಂದ ಅಲ್ಲಿನ ನೆಟ್‌ಫ್ಲಿಕ್ಸ್ ಸರ್ವರ್‌ಗಳು ಕೆಲಕಾಲ ಕ್ರ್ಯಾಶ್ ಆಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚಿತ್ರದ ಬಿಡುಗಡೆಗಾಗಿ ಪಾಕಿಸ್ತಾನಿ ಪ್ರೇಕ್ಷಕರು ಮಧ್ಯರಾತ್ರಿಯಿಂದಲೇ ಕಾದು ಕುಳಿತಿದ್ದರು ಎನ್ನಲಾಗಿದೆ. ಚಿತ್ರ ಒಟಿಟಿಗೆ ಬರುತ್ತಿದ್ದಂತೆ ಏಕಕಾಲದಲ್ಲಿ ಲಕ್ಷಾಂತರ ಜನರು ಲಾಗಿನ್ ಆಗಿದ್ದರಿಂದ ತಾಂತ್ರಿಕ ಅಡಚಣೆ ಉಂಟಾಗಿ, ವಿಡಿಯೋ ಬಫರಿಂಗ್ ಸಮಸ್ಯೆಯನ್ನು ಎದುರಿಸಬೇಕಾಯಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಪಾಕಿಸ್ತಾನದ ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಮಾವಿಯಾ ಉಮರ್ ಫಾರೂಕಿ ಅವರು ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ತಮ್ಮ ಇಂಟರ್ನೆಟ್ ಸಂಪರ್ಕ ಚೆನ್ನಾಗಿದ್ದರೂ ನೆಟ್‌ಫ್ಲಿಕ್ಸ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ತೋರಿಸಿದ್ದಾರೆ. ಆದಾಗ್ಯೂ, ಸರ್ವರ್ ಕ್ರ್ಯಾಶ್ ಕುರಿತು ನೆಟ್‌ಫ್ಲಿಕ್ಸ್ ಸಂಸ್ಥೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಪಾಕಿಸ್ತಾನದಲ್ಲಿ ಈ ಚಿತ್ರದ ಮೇಲಿರುವ ಕ್ರೇಜ್ ಅಷ್ಟಕ್ಕೇ ನಿಂತಿಲ್ಲ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 'ಧುರಂಧರ್ 2' ಅಲ್ಲಿನ ನೆಟ್‌ಫ್ಲಿಕ್ಸ್ ಟ್ರೆಂಡಿಂಗ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನವನ್ನು ಕಾಯ್ದುಕೊಂಡಿದೆ. ಈ ಬಗ್ಗೆ ಮತ್ತೊಂದು ವಿಡಿಯೋ ಹಂಚಿಕೊಂಡಿರುವ ಮಾವಿಯಾ ಉಮರ್ ಫಾರೂಕಿ, "ಚಿತ್ರದಲ್ಲಿ ವಾಸ್ತವವನ್ನು ತೋರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಲ್ಲ, ಆದರೆ ಚಿತ್ರವನ್ನು ಹೇಗೆ ನಿರ್ಮಿಸಲಾಗಿದೆ ಮತ್ತು ರಣವೀರ್ ಸಿಂಗ್ ಅವರ ಪಾತ್ರ ಹೇಗಿದೆ ಎಂಬುದನ್ನು ನೋಡಲು ಪಾಕಿಸ್ತಾನದ ಜನರು ತೀವ್ರ ಕುತೂಹಲ ಹೊಂದಿದ್ದಾರೆ" ಎಂದು ತಿಳಿಸಿದ್ದಾರೆ.
ಚಿತ್ರಮಂದಿರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದ ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು ಒಟಿಟಿಯಲ್ಲಿ ಮತ್ತಷ್ಟು ಕದರ್ ತೋರಿಸುತ್ತಿದೆ. ಸದ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುವ ಈ ಚಿತ್ರವು, ಭಾರತೀಯ ಪ್ರೇಕ್ಷಕರಿಗಾಗಿ ಜೂನ್ 4 ರಂದು 'ಜಿಯೋ ಹಾಟ್‌ಸ್ಟಾರ್' ಒಟಿಟಿ ವೇದಿಕೆಯಲ್ಲಿ ವಿಶೇಷ ಪ್ರೀಮಿಯರ್ ಪ್ರದರ್ಶನ ಕಾಣಲಿದ್ದು, ಜೂನ್ 5 ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಅಧಿಕೃತವಾಗಿ ಸ್ಟ್ರೀಮಿಂಗ್ ಆರಂಭಿಸಲಿದೆ.