image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ನಿರೋದ್ಯೋಗಿ ಯುವಕರು ಜಿರಳೆಗಳಂತೆ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ: ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್

ನಿರೋದ್ಯೋಗಿ ಯುವಕರು ಜಿರಳೆಗಳಂತೆ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ: ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ : ​ವೃತ್ತಿಯಲ್ಲಿ ಯಾವುದೇ ಕೆಲಸವಿಲ್ಲದ ಮತ್ತು ನಿರೋದ್ಯೋಗಿಗಳಾಗಿರುವ ಕೆಲವು ಯುವಕರು ಜಿರಳೆಗಳಂತೆ ಸಾಮಾಜಿಕ ಜಾಲತಾಣಗಳು, ಮಾಧ್ಯಮ ಹಾಗೂ ಆರ್‌ಟಿಐ ಕಾರ್ಯಕರ್ತರಾಗಿ ರೂಪಾಂತರಗೊಂಡು ವ್ಯವಸ್ಥೆಯ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತಾರೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿಲ್ಲಿ ಉಚ್ಚ ನ್ಯಾಯಾಲಯದಿಂದ ತಮಗೆ 'ಹಿರಿಯ ನ್ಯಾಯವಾದಿ' (ಸೀನಿಯರ್ ಅಡ್ವೊಕೇಟ್) ಪದನಾಮ ನೀಡುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ನಡೆಸುತ್ತಿದ್ದ ಸಂದರ್ಭದಲ್ಲಿ ಈ ಕಠಿಣ ಅವಲೋಕನಗಳನ್ನು ಮಾಡಲಾಗಿದೆ.

​ಅರ್ಜಿದಾರ ವಕೀಲರು ತಮಗೆ ಹಿರಿಯ ವಕೀಲರ ಸ್ಥಾನಮಾನ ನೀಡಬೇಕೆಂದು ಪದೇ ಪದೇ ನ್ಯಾಯಾಲಯದ ಮೊರೆ ಹೋಗುತ್ತಿರುವುದನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠವು, "ಹಿರಿಯ ನ್ಯಾಯವಾದಿ ಪದನಾಮ ಎಂಬುದು ನ್ಯಾಯಾಲಯವು ವಕೀಲರ ಅರ್ಹತೆ ನೋಡಿ ನೀಡುವ ಗೌರವವೇ ಹೊರತು, ಅದನ್ನು ಈ ರೀತಿ ಬೆನ್ನಟ್ಟಿ ಅಥವಾ ಒತ್ತಾಯಿಸಿ ಪಡೆಯುವುದಲ್ಲ" ಎಂದು ಸ್ಪಷ್ಟಪಡಿಸಿತು. ವಿಚಾರಣೆಯ ವೇಳೆ ಅರ್ಜಿದಾರರ ವೃತ್ತಿಪರ ನಡವಳಿಕೆ ಹಾಗೂ ಅವರು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೋಸ್ಟ್‌ಗಳನ್ನು ಉಲ್ಲೇಖಿಸಿದ ನ್ಯಾಯಪೀಠವು, "ಇಡೀ ಜಗತ್ತಿನಲ್ಲಿ ಎಲ್ಲರೂ ಹಿರಿಯ ವಕೀಲರಾಗಲು ಅರ್ಹರಿರಬಹುದು, ಆದರೆ ನಿಮ್ಮ ನಡವಳಿಕೆಯನ್ನು ನೋಡಿದರೆ ನೀವು ಮಾತ್ರ ಖಂಡಿತಾ ಈ ಹುದ್ದೆಗೆ ಅರ್ಹರಲ್ಲ" ಎಂದು ನೇರವಾಗಿಯೇ ಹೇಳಿತು.

​ಒಂದು ವೇಳೆ ದಿಲ್ಲಿ ಉಚ್ಚ ನ್ಯಾಯಾಲಯವೇನಾದರೂ ನಿಮಗೆ ಹಿರಿಯ ವಕೀಲರ ಪದನಾಮವನ್ನು ನೀಡಿದ್ದರೂ ಸಹ, ನಿಮ್ಮ ವೃತ್ತಿಪರ ನಡತೆಯನ್ನು ಪರಿಶೀಲಿಸಿದ ನಂತರ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸುತ್ತಿತ್ತು ಎಂದು ಮುಖ್ಯ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದರು. ಸಮಾಜದಲ್ಲಿ ಈಗಾಗಲೇ ವ್ಯವಸ್ಥೆ ಮತ್ತು ನ್ಯಾಯಾಂಗದ ಮೇಲೆ ದಾಳಿ ಮಾಡುವ 'ಪರಾವಲಂಬಿಗಳು' ಇದ್ದಾರೆ, ಈಗ ನೀವು ಕೂಡ ಅವರೊಂದಿಗೆ ಕೈಜೋಡಿಸಲು ಬಯಸುವಿರಾ ಎಂದು ಪೀಠವು ವಕೀಲರನ್ನು ಪ್ರಶ್ನಿಸಿತು.

​ಮುಂದುವರಿದು ಮಾತನಾಡಿದ ಸಿಜೆಐ ಅವರು, "ವೃತ್ತಿಯಲ್ಲಿ ಯಾವುದೇ ಸ್ಥಾನಮಾನವಿಲ್ಲದ, ಉದ್ಯೋಗವಿಲ್ಲದ ಜಿರಳೆಗಳಂತಹ ಕೆಲವು ಯುವಕರು ಸಮಾಜದಲ್ಲಿದ್ದಾರೆ. ಅವರಲ್ಲಿ ಕೆಲವರು ಮಾಧ್ಯಮ ವ್ಯಕ್ತಿಗಳು, ಸಾಮಾಜಿಕ ಜಾಲತಾಣ ಬಳಕೆದಾರರು, ಆರ್‌ಟಿಐ ಕಾರ್ಯಕರ್ತರು ಮತ್ತು ಇನ್ನು ಕೆಲವರು ಸಾಮಾಜಿಕ ಕಾರ್ಯಕರ್ತರಾಗುತ್ತಾರೆ. ಇದಾದ ನಂತರ ಅವರು ಎಲ್ಲರ ಮೇಲೆಯೂ ಮತ್ತು ಇಡೀ ವ್ಯವಸ್ಥೆಯ ಮೇಲೆಯೂ ದಾಳಿ ಮಾಡಲು ಆರಂಭಿಸುತ್ತಾರೆ" ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ನ್ಯಾಯಾಲಯದ ಕಠಿಣ ನಿಲುವನ್ನು ಮನಗಂಡ ಅರ್ಜಿದಾರ ವಕೀಲರು, ಅಂತಿಮವಾಗಿ ಪೀಠದ ಕ್ಷಮೆಯಾಚಿಸಿ ತಮ್ಮ ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿದರು. ಇದಕ್ಕೆ ನ್ಯಾಯಾಲಯವು ಸಮ್ಮತಿ ಸೂಚಿಸಿತು.

​ಇದೇ ವಿಚಾರಣೆಯ ಸಂದರ್ಭದಲ್ಲಿ ದೇಶದ ಕಾನೂನು ಶಿಕ್ಷಣದ ಗುಣಮಟ್ಟ ಮತ್ತು ವಕೀಲರ ಪದವಿಗಳ ಬಗ್ಗೆಯೂ ಸುಪ್ರೀಂ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿತು. ಇಂದು ಕಪ್ಪು ಕೋಟು ಧರಿಸಿರುವ ಅನೇಕ ವಕೀಲರ ಕಾನೂನು ಪದವಿಗಳ (ಎಲ್‌ಎಲ್‌ಬಿ) ನೈಜತೆಯ ಬಗ್ಗೆ ನಮಗೆ ತೀವ್ರ ಅನುಮಾನಗಳಿವೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಚುನಾವಣಾ ರಾಜಕೀಯ ಮತ್ತು ವೋಟುಗಳ ಕಾರಣದಿಂದಾಗಿ ಇಂತಹವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ. ಆದ್ದರಿಂದ, ದಿಲ್ಲಿಯ ತೀಸ್ ಹಜಾರಿ ಸೇರಿದಂತೆ ಪ್ರಮುಖ ನ್ಯಾಯಾಲಯಗಳಲ್ಲಿರುವ ವಕೀಲರ ಪದವಿಗಳ ನೈಜತೆಯನ್ನು ಪರಿಶೀಲಿಸಲು ಸಿಬಿಐ (CBI) ತನಿಖೆಗೆ ಆದೇಶಿಸುವ ಬಗ್ಗೆ ನ್ಯಾಯಾಲಯವು ಗಂಭೀರವಾಗಿ ಯೋಚಿಸುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.

Category
ಕರಾವಳಿ ತರಂಗಿಣಿ