image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಒಪ್ಪಿಕೊಂಡ ಕೇಂದ್ರ; ಜೂನ್ 21ಕ್ಕೆ ಮರು ಪರೀಕ್ಷೆ ಪ್ರಕಟ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಒಪ್ಪಿಕೊಂಡ ಕೇಂದ್ರ; ಜೂನ್ 21ಕ್ಕೆ ಮರು ಪರೀಕ್ಷೆ ಪ್ರಕಟ

ನವದೆಹಲಿ : ​ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET UG 2026) ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ಕೇಂದ್ರ ಸರಕಾರ ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ಕುರಿತು ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, 'ಸಂಭಾವ್ಯ ಪ್ರಶ್ನೆ ಪತ್ರಿಕೆ' ಹೆಸರಿನಲ್ಲಿ ಅಸಲಿ ಪ್ರಶ್ನೆ ಪತ್ರಿಕೆಯೇ ಸೋರಿಕೆಯಾಗಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಮೇ 3ರಂದು ನಡೆದಿದ್ದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಮುಂಬರುವ ಜೂನ್ 21ರಂದು ದೇಶಾದ್ಯಂತ ಮರು ಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತೀರ್ಮಾನಿಸಿದೆ ಎಂದು ಅವರು ಪ್ರಕಟಿಸಿದ್ದಾರೆ.

​ಕಳೆದ ವರ್ಷ ಎದುರಾಗಿದ್ದ ವಿವಾದಗಳ ನಂತರ, ಪರೀಕ್ಷಾ ವ್ಯವಸ್ಥೆಯ ಸುಧಾರಣೆಗಾಗಿ ರಚಿಸಲಾಗಿದ್ದ ಕೆ. ರಾಧಾಕೃಷ್ಣನ್ ಸಮಿತಿಯ ಶಿಫಾರಸುಗಳನ್ನು NEET 2025 ಮತ್ತು 2026ರ ಪರೀಕ್ಷೆಗಳಲ್ಲಿ ಅನ್ವಯಿಸಲಾಗಿತ್ತು. ಆದಾಗ್ಯೂ ಭದ್ರತಾ ಲೋಪದಿಂದಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಾಗಿರುವ ಈ ಲೋಪದ ಸಂಪೂರ್ಣ ಜವಾಬ್ದಾರಿಯನ್ನು ಸರಕಾರ ವಹಿಸಿಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಧಾರಣೆ ತರಲು ರಾಧಾಕೃಷ್ಣನ್ ಸಮಿತಿಯು ಒಟ್ಟು 95 ಶಿಫಾರಸುಗಳನ್ನು ಮಾಡಿತ್ತಾದರೂ, ಈ ಬಾರಿಯ ಪರೀಕ್ಷೆಯಲ್ಲಿ ಅವುಗಳನ್ನು ಸಂಪೂರ್ಣವಾಗಿ ಪಾಲಿಸಲಾಗಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

​ಮೇ 3ರಂದು ಪರೀಕ್ಷೆ ನಡೆದ ನಂತರ, ಮೇ 7ರ ವೇಳೆಗೆ ಮಾರುಕಟ್ಟೆಯಲ್ಲಿದ್ದ ಸಂಭಾವ್ಯ ಪ್ರಶ್ನೆ ಪತ್ರಿಕೆಗಳಲ್ಲಿದ್ದ ಹಲವಾರು ಪ್ರಶ್ನೆಗಳು ಮೂಲ ಪತ್ರಿಕೆಗೆ ಹತ್ತಿರದ ಹೋಲಿಕೆ ಹೊಂದಿವೆ ಎಂಬ ದೂರುಗಳು ಎನ್‌ಟಿಎಗೆ ಬಂದಿದ್ದವು. ಇದರ ಬೆನ್ನಲ್ಲೇ ಉನ್ನತ ಶಿಕ್ಷಣ ಇಲಾಖೆಯು ಪ್ರಾಥಮಿಕ ವಿಚಾರಣೆಯನ್ನು ಆರಂಭಿಸಿತ್ತು. ಪತ್ರಿಕಾಗೋಷ್ಠಿಯಲ್ಲಿ ಎನ್‌ಟಿಎ ಸಂಸ್ಥೆಯ ಒಳಗಿನವರೇ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸಿಬಿಐ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿದ್ದು, ಇಡೀ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದೆ. ಪತ್ರಿಕೆ ಸೋರಿಕೆಯ ಮೂಲ ಮತ್ತು ಒಳಗಿನವರ ಶಾಮೀಲಾತಿಯ ಬಗ್ಗೆ ಸಿಬಿಐ ಕೂಲಂಕಷವಾಗಿ ತನಿಖೆ ನಡೆಸಲಿದೆ ಎಂದಿದ್ದಾರೆ. ಶಿಕ್ಷಣ ಮಾಫಿಯಾ ಮತ್ತು ಸಂಘಟಿತ ವಂಚಕರ ಜಾಲದ ವಿರುದ್ಧ ಸರಕಾರ ಶೂನ್ಯ ಸಹಿಷ್ಣುತೆ ಹೊಂದಿದ್ದು, ಯಾವುದೇ ಕಾರಣಕ್ಕೂ ಹಣಬಲ ಇರುವವರು ಅರ್ಹ ವಿದ್ಯಾರ್ಥಿಗಳ ಸೀಟುಗಳನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

​ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಮರು ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳಿಗೆ ತಮ್ಮಿಷ್ಟದ ನಗರಗಳನ್ನು ಆಯ್ಕೆ ಮಾಡಿಕೊಳ್ಳಲು ಹೊಸದಾಗಿ ಅವಕಾಶ ನೀಡಲಾಗುವುದು. ಇದರಿಂದ ವಿದ್ಯಾರ್ಥಿಗಳ ಪ್ರಯಾಣದ ಅಲೆದಾಟ ಮತ್ತು ಆರ್ಥಿಕ ಹೊರೆ ಕಡಿಮೆಯಾಗಲಿದೆ. ಹೊಸ ನೀಟ್ ಯುಜಿ ಮರು ಪರೀಕ್ಷೆಯ ಪ್ರವೇಶ ಪತ್ರಗಳನ್ನು (Admit Cards) ಜೂನ್ 14, 2026ರೊಳಗೆ ಎನ್‌ಟಿಎ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುವುದು. ವಿದ್ಯಾರ್ಥಿಗಳು ತಮ್ಮ ಹಳೆಯ ಅರ್ಜಿ ವಿವರಗಳನ್ನು ಬಳಸಿಕೊಂಡೇ ಹಾಲ್ ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಮುಂದಿನ ವರ್ಷದಿಂದ ಇಂತಹ ಲೋಪಗಳನ್ನು ತಡೆಯಲು ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಸಲು ಸರಕಾರ ನಿರ್ಧರಿಸಿದೆ.

Category
ಕರಾವಳಿ ತರಂಗಿಣಿ