ಬೆಂಗಳೂರು : ಉದ್ಯಮಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯುನಿಕೇಷನ್ಸ್ (RCom) ಮತ್ತು ಅದರ ಅಂಗಸಂಸ್ಥೆಗಳ ಮಾಜಿ ಉನ್ನತ ಅಧಿಕಾರಿಗಳಿಗೆ ಕೇಂದ್ರೀಯ ತನಿಖಾ ದಳ (CBI) ಭಾರಿ ಶಾಕ್ ನೀಡಿದೆ. ಸಾರ್ವಜನಿಕ ವಲಯದ ವಿವಿಧ ಬ್ಯಾಂಕ್‌ಗಳಿಗೆ ಬರೋಬ್ಬರಿ 27,337 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಏಕಕಾಲಕ್ಕೆ ಬೃಹತ್ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಈ ತನಿಖೆಯು ಅನಿಲ್ ಅಂಬಾನಿ ಸಮೂಹದ ಕಂಪನಿಗಳಿಗೆ ದೊಡ್ಡ ಆರ್ಥಿಕ ಹಾಗೂ ಕಾನೂನು ಸಂಕಷ್ಟ ತಂದೊಡ್ಡಿದೆ.
ಸಿಬಿಐ ವಿಶೇಷ ದಳದ ಅಧಿಕಾರಿಗಳು ಬೆಂಗಳೂರು, ಮುಂಬೈ ಮತ್ತು ಗುರುಗ್ರಾಮ (ಗುರಗಾಂವ್) ನಗರಗಳ ಒಟ್ಟು 7 ಆಯಕಟ್ಟಿನ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ರಿಲಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆಯ ಮಾಜಿ ಹಿರಿಯ ಅಧಿಕಾರಿಗಳು ಹಾಗೂ ನಿರ್ದೇಶಕರ ನಿವಾಸ ಮತ್ತು ಕಚೇರಿಗಳ ಮೇಲೆ ಈ ಶೋಧ ನಡೆದಿದೆ. ದಾಳಿಯ ಸಂದರ್ಭದಲ್ಲಿ ಹಗರಣಕ್ಕೆ ಸಂಬಂಧಿಸಿದ ಲೇವಾದೇವಿ ಇತಿಹಾಸ, ಬ್ಯಾಂಕ್ ಸಾಲದ ಹಣವನ್ನು ಬೇರೆಡೆಗೆ ವರ್ಗಾಯಿಸಿದ (ಡೈವರ್ಷನ್ ಆಫ್ ಫಂಡ್ಸ್) ವಿವರಗಳು, ಹಾರ್ಡ್ ಡಿಸ್ಕ್ ಹಾಗೂ ಪ್ರಮುಖ ಆಸ್ತಿ ಪತ್ರಗಳು ಸೇರಿದಂತೆ ಹತ್ತಾರು ಡಿಜಿಟಲ್ ಸಾಕ್ಷ್ಯಗಳನ್ನು ಸಿಬಿಐ ವಶಪಡಿಸಿಕೊಂಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಒಕ್ಕೂಟದಿಂದ ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ಅಂಗಸಂಸ್ಥೆಗಳು ಹತ್ತಾರು ಸಾವಿರ ಕೋಟಿ ರೂಪಾಯಿ ಸಾಲ ಪಡೆದಿದ್ದವು. ಆದರೆ, ಈ ಹಣವನ್ನು ಉದ್ದೇಶಿತ ಉದ್ಯಮಕ್ಕೆ ಬಳಸದೆ ಶೆಲ್ ಕಂಪನಿಗಳ (ನಕಲಿ ಕಂಪನಿಗಳು) ಮೂಲಕ ವಿದೇಶಗಳಿಗೆ ಮತ್ತು ವೈಯಕ್ತಿಕ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ, ಬ್ಯಾಂಕ್‌ಗಳಿಗೆ ಎನ್‌ಪಿಎ (NPA) ನಷ್ಟ ಉಂಟುಮಾಡಲಾಗಿದೆ ಎಂದು ಬ್ಯಾಂಕ್‌ಗಳು ದೂರು ನೀಡಿದ್ದವು. ಈ ಬೃಹತ್ ಹಗರಣದ ತನಿಖೆಯನ್ನು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ತನಿಖೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ತನಿಖಾ ಸಂಸ್ಥೆಗೆ ಕೋರ್ಟ್ ಕಠಿಣ ನಿರ್ದೇಶನ ನೀಡಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್ 20ರಂದು ರಿಲಯನ್ಸ್ ಕಮ್ಯುನಿಕೇಷನ್ಸ್‌ನ ಜಂಟಿ ಅಧ್ಯಕ್ಷ ಡಿ. ವಿಶ್ವನಾಥ್ ಮತ್ತು ಉಪಾಧ್ಯಕ್ಷ ಅನಿಲ್ ಕಲ್ಯಾ ಅವರನ್ನು ಸಿಬಿಐ ಬಂಧಿಸಿತ್ತು. ಬ್ಯಾಂಕಿಂಗ್ ಕಾರ್ಯಾಚರಣೆ ಮತ್ತು ಹಣದ ದುರುಪಯೋಗದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪವಿದ್ದು, ಪ್ರಸ್ತುತ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಸಿಬಿಐ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಒಟ್ಟು 31 ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದು, ತನಿಖೆಯನ್ನು ತೀವ್ರಗೊಳಿಸಿದೆ.