ನವದೆಹಲಿ : ವಿಶ್ವದ ಅತಿ ದೊಡ್ಡ ತೈಲ ಸಾಗಾಣಿಕಾ ಮಾರ್ಗವಾದ ಹೊರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಇರಾನ್ ಈಗ ಭಾರತದ ನೆರವನ್ನು ಕೋರಿದೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಹೊರ್ಮುಜ್ ಜಲಸಂಧಿಯ ಮೂಲಕ ಎಲ್ಲಾ ಹಡಗುಗಳು ಸುರಕ್ಷಿತವಾಗಿ ಸಂಚರಿಸಲು ಇರಾನ್ ಸಹಾಯ ಮಾಡಲು ಸಿದ್ಧವಿದೆ ಎಂದು ಘೋಷಿಸುವ ಮೂಲಕ ಜಾಗತಿಕ ಮಾರುಕಟ್ಟೆಗೆ ಭರವಸೆಯ ಸಂದೇಶ ನೀಡಿದ್ದಾರೆ. ಇದೇ ವೇಳೆ ಇರಾನ್ ಪರಮಾಣು ಅಸ್ತ್ರಗಳನ್ನು ತಯಾರಿಸುತ್ತಿದೆ ಎಂಬ ಅಮೆರಿಕದ ಆರೋಪಗಳನ್ನು ತಳ್ಳಿಹಾಕಿದ ಅವರು, ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಬಯಸಿಲ್ಲ ಎಂದು ಸ್ಪಷ್ಟಪಡಿಸಿದರು. ಹೊರ್ಮುಜ್ ಜಲಸಂಧಿಯ ಪರಿಸ್ಥಿತಿ ಈಗ ತುಂಬಾ ಸಂಕೀರ್ಣವಾಗಿದ್ದು, ಮಾತುಕತೆಯ ಮೂಲಕ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಹಾಗೂ ಮಿಲಿಟರಿ ಕಾರ್ಯಾಚರಣೆಯಿಂದ ಯಾವುದೇ ಲಾಭವಿಲ್ಲ ಎಂದು ಅವರು ತಿಳಿಸಿದರು. ಚೀನಾವು ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ಯಾವುದೇ ಶಾಂತಿ ಕ್ರಮಗಳನ್ನು ಇರಾನ್ ಸ್ವಾಗತಿಸುತ್ತದೆ ಎಂದು ಅಬ್ಬಾಸ್ ಇದೇ ವೇಳೆ ಹೇಳಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ಅರಾಘ್ಚಿ, ಭಾರತದ ಪಾತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ತಾವು ಪ್ರಧಾನಿ ಮೋದಿ ಅವರೊಂದಿಗೆ ಸಂಕ್ಷಿಪ್ತವಾಗಿ ಮತ್ತು ಜೈಶಂಕರ್ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿರುವುದಾಗಿ ತಿಳಿಸಿದ ಅವರು, ಹೊರ್ಮುಜ್ ಜಲಸಂಧಿ ಮತ್ತು ಪರ್ಷಿಯನ್ ಕೊಲ್ಲಿಯ ಭದ್ರತೆಯ ಬಗ್ಗೆ ಭಾರತ ಮತ್ತು ಇರಾನ್ ಒಂದೇ ರೀತಿಯ ಕಾಳಜಿಯನ್ನು ಹೊಂದಿವೆ ಎಂದರು. ಈ ಪ್ರದೇಶದ ಶಾಂತಿಗಾಗಿ ಭಾರತವು ವಹಿಸುವ ಯಾವುದೇ ರಚನಾತ್ಮಕ ಪಾತ್ರವನ್ನು ನಾವು ಸ್ವಾಗತಿಸುತ್ತೇವೆ ಎಂದು ಅರಾಘ್ಚಿ ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ ಅವರು, ಅಮೆರಿಕನ್ನರನ್ನು ನಂಬಲು ಇರಾನ್‌ಗೆ ಯಾವುದೇ ಕಾರಣಗಳಿಲ್ಲ, ಆದರೆ ಇರಾನ್ ಅನ್ನು ನಂಬಲು ಅಮೆರಿಕನ್ನರಿಗೆ ಎಲ್ಲಾ ಕಾರಣಗಳಿವೆ ಎಂದು ಮಾರ್ಮಿಕವಾಗಿ ನುಡಿದರು. ತಾವು ರಾಜತಾಂತ್ರಿಕತೆಗೆ ಅವಕಾಶ ನೀಡಲು ಕದನ ವಿರಾಮವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ ಅವರು, ಪಾಕಿಸ್ತಾನದ ಮಧ್ಯಸ್ಥಿಕೆಯು ಇನ್ನೂ ವಿಫಲವಾಗಿಲ್ಲ ಮತ್ತು ಶಾಂತಿಯ ಪ್ರಯತ್ನಗಳು ಮುಂದುವರಿಯುತ್ತಿವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಹೊರ್ಮುಜ್ ಜಲಸಂಧಿಯು ವಿಶ್ವದ ಒಟ್ಟು ತೈಲ ವ್ಯಾಪಾರದ ಶೇ. 20 ಕ್ಕಿಂತ ಹೆಚ್ಚು ಭಾಗವನ್ನು ನಿಯಂತ್ರಿಸುವುದರಿಂದ, ಇಲ್ಲಿನ ಅಸ್ಥಿರತೆಯು ಜಾಗತಿಕ ತೈಲ ಬೆಲೆಗಳ ಮೇಲೆ ನೇರ ಮತ್ತು ತೀವ್ರ ಪರಿಣಾಮ ಬೀರುತ್ತದೆ. ಪ್ರಸ್ತುತ ಇರಾನ್ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಭರವಸೆ ನೀಡಿರುವುದು ಭಾರತದಂತಹ ಭಾರಿ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುವ ದೇಶಗಳಿಗೆ ದೊಡ್ಡ ಮಟ್ಟದ ನಿರಾಳತೆಯನ್ನು ತಂದಿದೆ.