ಚೆನ್ನೈ : ಚೆನ್ನೈ ಮತ್ತು ಮಧುರೈ ವಿಮಾನ ನಿಲ್ದಾಣಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಕ್ರಮವಾಗಿ ಮತ ಚಲಾಯಿಸಿದ ಆರೋಪದ ಮೇಲೆ ಶ್ರೀಲಂಕಾ, ಬ್ರಿಟನ್, ಇಂಡೋನೇಷ್ಯಾ ಮತ್ತು ಕೆನಡಾ ಸೇರಿದಂತೆ ವಿವಿಧ ದೇಶಗಳ ಸುಮಾರು 25 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ವಿದೇಶಿ ಪಾಸ್‌ಪೋರ್ಟ್ ಹೊಂದಿದ್ದ ಈ ವ್ಯಕ್ತಿಗಳು ಪ್ರಯಾಣಕ್ಕಾಗಿ ವಿಮಾನ ನಿಲ್ದಾಣಕ್ಕೆ ಬಂದಾಗ, ಅವರ ಎಡಗೈ ತೋರು ಬೆರಳಿನ ಮೇಲಿದ್ದ ಅಳಿಸಲಾಗದ ಶಾಯಿಯನ್ನು ಗಮನಿಸಿದ ವಲಸೆ ಅಧಿಕಾರಿಗಳು ಅವರನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023, ಜನಪ್ರತಿನಿಧಿ ಕಾಯ್ದೆ 1950 ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಶಂಕಿತರಲ್ಲಿ ಹೆಚ್ಚಿನವರು ಶ್ರೀಲಂಕಾ ಮೂಲದವರಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಇವರು ಭಾರತದ ಪೌರತ್ವ ಹೊಂದಿಲ್ಲದಿದ್ದರೂ, ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿ ಅಕ್ರಮವಾಗಿ ಮತದಾನ ಮಾಡಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಚುನಾವಣಾ ಸಮಯದಲ್ಲಿ ಭಾರತಕ್ಕೆ ಬಂದಿದ್ದ ಇನ್ನೂ ಅನೇಕ ವಿದೇಶಿ ಪ್ರಜೆಗಳು ಅಕ್ರಮವಾಗಿ ಮತದಾನ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮತದಾನದ ನಂತರ ವಿದೇಶಿಯರು ದೇಶ ತೊರೆಯಲು ಯತ್ನಿಸುತ್ತಿರುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಚೆನ್ನೈ, ಮಧುರೈ ಸೇರಿದಂತೆ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಈ ಪೈಕಿ ಹೆಚ್ಚಿನವರು ಚೆನ್ನೈನಲ್ಲಿ ಸಿಕ್ಕಿಬಿದ್ದಿದ್ದಾರೆ. ಇದೇ ವೇಳೆ ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿಯೂ ಇಬ್ಬರು ವಿದೇಶಿಯರು ಅಕ್ರಮವಾಗಿ ಮತದಾನ ಮಾಡಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.