ನವದೆಹಲಿ : ಹಿಂದೂ ಧರ್ಮ ಎಂಬುದು ಕೇವಲ ಆಚರಣೆಯಲ್ಲ, ಅದೊಂದು ಜೀವನ ವಿಧಾನವಾಗಿದ್ದು, ಒಬ್ಬ ವ್ಯಕ್ತಿ ತನ್ನನ್ನು ಹಿಂದೂ ಎಂದು ಸಾಬೀತುಪಡಿಸಲು ಕಡ್ಡಾಯವಾಗಿ ದೇವಸ್ಥಾನಗಳಿಗೆ ಭೇಟಿ ನೀಡಲೇಬೇಕು ಅಥವಾ ನಿರ್ದಿಷ್ಟ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲೇಬೇಕು ಎಂಬ ನಿಯಮವಿಲ್ಲ ಎಂದು ಸುಪ್ರೀಂ ಕೋರ್ಟ್ ಮಾರ್ಮಿಕವಾಗಿ ಹೇಳಿದೆ. ಶಬರಿಮಲೆ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶ ಹಾಗೂ ಲಿಂಗ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ಮಹತ್ವದ ಅವಲೋಕನ ಮಾಡಿದೆ.
ವಿಚಾರಣೆಯ 15ನೇ ದಿನವಾದ ಇಂದು ವಕೀಲ ಡಾ. ಜಿ. ಮೋಹನ್ ಗೋಪಾಲ್ ಅವರು ಹಿಂದೂ ಧರ್ಮದ ವ್ಯಾಖ್ಯಾನ ಮತ್ತು ವೇದಗಳ ಪ್ರಾಮುಖ್ಯತೆಯ ಕುರಿತು ವಾದ ಮಂಡಿಸಿದಾಗ, ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ಹಿಂದೂ ಧರ್ಮವನ್ನು ದೀರ್ಘಕಾಲದಿಂದಲೂ ಒಂದು ಜೀವನ ವಿಧಾನವೆಂದು ಅರ್ಥೈಸಿಕೊಳ್ಳಲಾಗಿದೆ ಎಂದು ವಿವರಿಸಿದರು. ಒಬ್ಬ ವ್ಯಕ್ತಿಯು ಹಿಂದೂವಾಗಿ ಉಳಿಯಲು ಕಡ್ಡಾಯವಾಗಿ ದೇವಸ್ಥಾನಕ್ಕೆ ಹೋಗಬೇಕಿಲ್ಲ ಅಥವಾ ವಿಧಿವಿಧಾನಗಳನ್ನು ಮಾಡಲೇಬೇಕಿಲ್ಲ; ನಂಬಿಕೆ ಎಂಬುದು ಸಂಪೂರ್ಣ ವೈಯಕ್ತಿಕವಾಗಿದ್ದು, ಧಾರ್ಮಿಕ ಆಚರಣೆಗಳನ್ನು ಮಾಡದ ಕಾರಣಕ್ಕೆ ಒಬ್ಬರ ಆಧ್ಯಾತ್ಮಿಕ ನಂಬಿಕೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಈ ಮಾತನ್ನು ಪುಷ್ಟೀಕರಿಸುತ್ತಾ, ಒಬ್ಬ ವ್ಯಕ್ತಿ ತನ್ನ ಮನೆಯ ಅಥವಾ ಗುಡಿಸಲಿನ ಒಳಗೆ ಒಂದು ದೀಪವನ್ನು ಹಚ್ಚುವುದು ಕೂಡ ಅವನ ಆಧ್ಯಾತ್ಮಿಕ ಮತ್ತು ಧಾರ್ಮಿಕ ನಂಬಿಕೆಯನ್ನು ಪ್ರದರ್ಶಿಸಲು ಸಾಕಾಗುತ್ತದೆ ಎಂದು ತಿಳಿಸಿದರು. ಧಾರ್ಮಿಕ ಸಮುದಾಯಗಳ ಒಳಗಿನಿಂದಲೇ ಸಾಮಾಜಿಕ ನ್ಯಾಯಕ್ಕಾಗಿ ಬೇಡಿಕೆಗಳು ಏಳುತ್ತಿರುವ ಈ ಕಾಲಘಟ್ಟದಲ್ಲಿ, 1966ರ ತೀರ್ಪಿನಂತೆ ವೇದಗಳನ್ನು ಸರ್ವೋಚ್ಚ ಎಂದು ಒಪ್ಪುವವರಷ್ಟೇ ಹಿಂದೂಗಳು ಎಂಬ ವ್ಯಾಖ್ಯಾನವು ಎಷ್ಟು ಪ್ರಸ್ತುತ ಎಂಬ ವಾದವೂ ಪೀಠದ ಮುಂದೆ ಮಂಡನೆಯಾಗಿದ್ದು, ಈ ಸೂಕ್ಷ್ಮ ಪ್ರಕರಣದ ವಿಚಾರಣೆ ಮುಂದುವರಿದಿದೆ.