image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

​ವಯನಾಡಿನಲ್ಲಿ ರಾಹುಲ್-ಪ್ರಿಯಾಂಕಾ ವಿರುದ್ಧ ಪೋಸ್ಟರ್ ಸಮರ: ಕೇರಳ ಸಿಎಂ ಆಯ್ಕೆ ವಿಳಂಬಕ್ಕೆ ಕಾರ್ಯಕರ್ತರ ಆಕ್ರೋಶ

​ವಯನಾಡಿನಲ್ಲಿ ರಾಹುಲ್-ಪ್ರಿಯಾಂಕಾ ವಿರುದ್ಧ ಪೋಸ್ಟರ್ ಸಮರ: ಕೇರಳ ಸಿಎಂ ಆಯ್ಕೆ ವಿಳಂಬಕ್ಕೆ ಕಾರ್ಯಕರ್ತರ ಆಕ್ರೋಶ

ಕೇರಳಮ್ : ​ಕೇರಳ ವಿಧಾನಸಭೆ ಚುನಾವಣೆ ಮುಗಿದು ಫಲಿತಾಂಶ ಹೊರಬಂದು ವಾರ ಕಳೆದರೂ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ಮುಗಿಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕೇರಳದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ರಾಜಕೀಯ ಜಿದ್ದಾಜಿದ್ದಿನ ನಡುವೆಯೇ ವಯನಾಡಿನ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಿರುದ್ಧ ವಿವಾದಾತ್ಮಕ ಪೋಸ್ಟರ್‌ಗಳು ಪ್ರತ್ಯಕ್ಷವಾಗಿರುವುದು ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿದೆ. "ರಾಹುಲ್ ಮತ್ತು ಪ್ರಿಯಾಂಕಾ ಅವರೇ, ಇನ್ನು ಮುಂದೆ ವಯನಾಡನ್ನು ಮರೆತುಬಿಡಿ, ಇಲ್ಲಿಂದ ನೀವು ಮತ್ತೆ ಸ್ಪರ್ಧಿಸಿದರೆ ಗೆಲ್ಲಲು ಸಾಧ್ಯವಿಲ್ಲ" ಎಂಬ ಎಚ್ಚರಿಕೆಯ ಸಂದೇಶಗಳು ಪೋಸ್ಟರ್‌ನಲ್ಲಿ ರಾರಾಜಿಸುತ್ತಿವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ವಿರುದ್ಧವೂ ಕಿಡಿಕಾರಿರುವ ಪ್ರತಿಭಟನಾಕಾರರು, ವೇಣುಗೋಪಾಲ್ ಅವರು ಹೈಕಮಾಂಡ್‌ನ ಬ್ಯಾಗ್ ಹೊರುವವರಾಗಿರಬಹುದು, ಆದರೆ ಅವರ ನಿರ್ಧಾರಗಳನ್ನು ಕೇರಳದ ಜನ ಕ್ಷಮಿಸುವುದಿಲ್ಲ ಎಂದು ಗುಡುಗಿದ್ದಾರೆ. 2019ರಲ್ಲಿ ಅಮೇಥಿ ಕೈತಪ್ಪಿದಂತೆ ಮುಂದಿನ ದಿನಗಳಲ್ಲಿ ಪ್ರಿಯಾಂಕಾ ಗಾಂಧಿ ವಯನಾಡಿನಲ್ಲಿ ಸೋಲು ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯೂ ಈ ಪೋಸ್ಟರ್‌ಗಳಲ್ಲಿದೆ. ಪ್ರಸ್ತುತ ಮುಖ್ಯಮಂತ್ರಿ ರೇಸ್‌ನಲ್ಲಿ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಅವರ ಹೆಸರುಗಳಿದ್ದರೂ, ಹೈಕಮಾಂಡ್ ಮಾತ್ರ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಮೀನಮೇಷ ಎಣಿಸುತ್ತಿರುವುದು ಕಾರ್ಯಕರ್ತರ ಈ ತೀವ್ರ ಆಕ್ರೋಶಕ್ಕೆ ಮೂಲ ಕಾರಣವಾಗಿದೆ. ಪೋಸ್ಟರ್ ಪ್ರೊಟೆಸ್ಟ್ ಮೂಲಕ ಹೈಕಮಾಂಡ್‌ಗೆ ನೇರ ಸವಾಲು ಹಾಕಿರುವ ಈ ಬೆಳವಣಿಗೆಯು ಕೇರಳ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ.

Category
ಕರಾವಳಿ ತರಂಗಿಣಿ