ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ದೇಶದ ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲ ಮೇಲ್ಮೈ ಕಲ್ಲಿದ್ದಲು ಹಾಗೂ ಲಿಗ್ನೈಟ್ ಅನಿಲೀಕರಣ ಯೋಜನೆಗೆ ₹37,500 ಕೋಟಿ ಮೊತ್ತದ ಬೃಹತ್ ಪ್ರೋತ್ಸಾಹಧನವನ್ನು ಘೋಷಿಸಲಾಗಿದೆ. 2030ರ ವೇಳೆಗೆ 100 ಮಿಲಿಯನ್ ಟನ್ ಕಲ್ಲಿದ್ದಲನ್ನು ಅನಿಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಈ ಯೋಜನೆಯ ಮೂಲಕ ಸುಮಾರು ₹3 ಲಕ್ಷ ಕೋಟಿ ಮೌಲ್ಯದ ಹೂಡಿಕೆಯನ್ನು ಆಕರ್ಷಿಸಲು ಸರ್ಕಾರ ಮುಂದಾಗಿದೆ. ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಭಾರತದಲ್ಲಿ ಸುಮಾರು 200 ವರ್ಷಗಳಿಗೆ ಸಾಕಾಗುವಷ್ಟು ಅಂದರೆ 401 ಶತಕೋಟಿ ಟನ್ ಕಲ್ಲಿದ್ದಲು ಮತ್ತು 47 ಶತಕೋಟಿ ಟನ್ ಲಿಗ್ನೈಟ್ ನಿಕ್ಷೇಪಗಳಿದ್ದು, ಇವುಗಳನ್ನು ಈಗ ಅನಿಲ ಉತ್ಪಾದನೆಗೆ ಬಳಸಿಕೊಳ್ಳುವ ಮಹತ್ವದ ಹೆಜ್ಜೆ ಇದಾಗಿದೆ ಎಂದು ತಿಳಿಸಿದರು.
ಕಲ್ಲಿದ್ದಲು ಅನಿಲೀಕರಣ ಪ್ರಕ್ರಿಯೆಯಲ್ಲಿ ಕಲ್ಲಿದ್ದಲನ್ನು 'ಸಿಂಗಾಸ್' ಎಂಬ ಸಂಶ್ಲೇಷಿತ ಅನಿಲವಾಗಿ ಪರಿವರ್ತಿಸಲಾಗುತ್ತದೆ. ಇದನ್ನು ಇಂಧನ, ರಸಗೊಬ್ಬರ ಮತ್ತು ರಾಸಾಯನಿಕಗಳ ತಯಾರಿಕೆಯಲ್ಲಿ ಬಳಸಬಹುದಾಗಿದ್ದು, ಇದರಿಂದಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳುವ ದ್ರವೀಕೃತ ನೈಸರ್ಗಿಕ ಅನಿಲ (LNG), ಯೂರಿಯಾ, ಅಮೋನಿಯಾ ಹಾಗೂ ಮೆಥನಾಲ್ ಮೇಲಿನ ಅವಲಂಬನೆ ಗಣನೀಯವಾಗಿ ತಗ್ಗಲಿದೆ. ಸದ್ಯ ದೇಶದ ಒಟ್ಟು ಇಂಧನ ಬಳಕೆಯ ಶೇ. 55ಕ್ಕೂ ಅಧಿಕ ಭಾಗವನ್ನು ಪೂರೈಸುತ್ತಿರುವ ಕಲ್ಲಿದ್ದಲು ಸಂಪತ್ತನ್ನು ಪರಿಸರ ಸ್ನೇಹಿ ಅನಿಲವಾಗಿ ಬದಲಾಯಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.
ಹೊಸ ಘಟಕಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಸ್ಥಾವರ ಮತ್ತು ಯಂತ್ರೋಪಕರಣ ವೆಚ್ಚದ ಶೇಕಡಾ 20ರವರೆಗೆ ಆರ್ಥಿಕ ಪ್ರೋತ್ಸಾಹಧನ ನೀಡಲು ಸರ್ಕಾರ ನಿರ್ಧರಿಸಿದೆ. ಒಂದು ಯೋಜನೆಗೆ ಗರಿಷ್ಠ ₹5,000 ಕೋಟಿ, ಒಂದೇ ಉತ್ಪನ್ನಕ್ಕೆ ₹9,000 ಕೋಟಿ ಹಾಗೂ ಒಂದು ಕಂಪನಿ ಗುಂಪಿಗೆ ₹12,000 ಕೋಟಿಗಳವರೆಗಿನ ಪ್ರೋತ್ಸಾಹಧನದ ಮಿತಿಯನ್ನು ನಿಗದಿಪಡಿಸಲಾಗಿದೆ. ಹೂಡಿಕೆದಾರರಿಗೆ ದೀರ್ಘಾವಧಿಯ ಭರವಸೆ ನೀಡಲು ಕಲ್ಲಿದ್ದಲು ಸಂಪರ್ಕ ಅವಧಿಯನ್ನು 30 ವರ್ಷಗಳಿಗೆ ವಿಸ್ತರಿಸಲಾಗಿದ್ದು, ಪಾರದರ್ಶಕ ಟೆಂಡರ್ ಪ್ರಕ್ರಿಯೆಯ ಮೂಲಕ ಯೋಜನೆಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಬೃಹತ್ ಯೋಜನೆಯಿಂದ ದೇಶಾದ್ಯಂತ ಸುಮಾರು 25 ಯೋಜನೆಗಳ ಮೂಲಕ 50,000ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ ಸುಮಾರು ₹6,300 ಕೋಟಿ ಆದಾಯ ಹರಿದುಬರುವ ನಿರೀಕ್ಷೆಯಿದೆ.