ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಹಿನ್ನೆಲೆಯಲ್ಲಿ ರದ್ದಾಗಿರುವ ನೀಟ್-ಯುಜಿ 2026 ಪರೀಕ್ಷೆಯ ಮರು ವೇಳಾಪಟ್ಟಿಯನ್ನು ಮುಂದಿನ 7 ರಿಂದ 10 ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್ಟಿಎ) ಮಹಾನಿರ್ದೇಶಕ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ. ಮಂಗಳವಾರ ದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಮರು ಪರೀಕ್ಷೆಯ ದಿನಾಂಕಗಳನ್ನು ಅಂತಿಮಗೊಳಿಸಲು ಸಂಸ್ಥೆಯು ತಜ್ಞರ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದರು. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಸಿಂಗ್, ಮರು ಪರೀಕ್ಷೆಗೆ ಅಭ್ಯರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕ ಪಡೆಯುವುದಿಲ್ಲ ಮತ್ತು ಈ ಹಿಂದೆ ಪಾವತಿಸಿದ ಶುಲ್ಕವನ್ನೂ ಮರುಪಾವತಿಸಲಾಗುವುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಪರೀಕ್ಷಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಕುರಿತು ಸಿಬಿಐ ತನಿಖೆ ನಡೆಯುತ್ತಿದೆ ಎಂದು ಅವರು ವಿವರಿಸಿದರು. ಸಂಸ್ಥೆಯ ಒಳಗಿನವರ ಪಾತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಸಿಬಿಐಗೆ ಒತ್ತಾಯಿಸಲಾಗಿದೆ ಎಂದರು. ದೇಶಾದ್ಯಂತ ಸುಮಾರು 22.79 ಲಕ್ಷ ವಿದ್ಯಾರ್ಥಿಗಳು ಮೇ 3 ರಂದು ನಡೆದಿದ್ದ ಈ ಪರೀಕ್ಷೆಗೆ ಹಾಜರಾಗಿದ್ದರು. ಅಕ್ರಮಗಳ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದಾಗಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದ್ದರೂ, ಈಗಿನ ಪರೀಕ್ಷಾ ಕೇಂದ್ರಗಳಲ್ಲೇ ಯಾವುದೇ ಹೊಸ ನೋಂದಣಿ ಇಲ್ಲದೆ ಮರು ಪರೀಕ್ಷೆ ನಡೆಸಲು ಎನ್ಟಿಎ ನಿರ್ಧರಿಸಿದೆ. ಆದರೆ, ಈ ಗಂಭೀರ ಲೋಪದ ಕುರಿತು ಪ್ರತಿಕ್ರಿಯಿಸಲು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಾಧ್ಯಮಗಳಿಗೆ ನಿರಾಕರಿಸಿದ್ದಾರೆ.