image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಬೂತ್ ಮುಕ್ತ ಪ್ರಯಾಣ: 2026ರ ಅಂತ್ಯದ ವೇಳೆಗೆ ಹೊಸ 'ಮಲ್ಟಿ-ಲೇನ್ ಫ್ರೀ ಫ್ಲೋ' ವ್ಯವಸ್ಥೆ ಜಾರಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಬೂತ್ ಮುಕ್ತ ಪ್ರಯಾಣ: 2026ರ ಅಂತ್ಯದ ವೇಳೆಗೆ ಹೊಸ 'ಮಲ್ಟಿ-ಲೇನ್ ಫ್ರೀ ಫ್ಲೋ' ವ್ಯವಸ್ಥೆ ಜಾರಿ

ನವದೆಹಲಿ : ​ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇನ್ನು ಮುಂದೆ ಟೋಲ್ ಪ್ಲಾಜಾಗಳ ಮುಂದೆ ಸಾಲಿನಲ್ಲಿ ನಿಂತು ಹಣ ಪಾವತಿಸುವ ಕಿರಿಕಿರಿಗೆ ಶಾಶ್ವತ ಮುಕ್ತಿ ಸಿಗಲಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ದೇಶಾದ್ಯಂತ ಹೊಸ ತಂತ್ರಜ್ಞಾನ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಘೋಷಿಸಿದ್ದು, 2026ರ ಅಂತ್ಯದ ವೇಳೆಗೆ ಪ್ರಸ್ತುತ ಇರುವ ಎಲ್ಲಾ ಭೌತಿಕ ಟೋಲ್ ಪ್ಲಾಜಾಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಟೋಲ್ ಬೂತ್‌ಗಳ ಬದಲಿಗೆ 'ಮಲ್ಟಿ-ಲೇನ್ ಫ್ರೀ ಫ್ಲೋ' (MLFF) ಎಂಬ ಅತ್ಯಾಧುನಿಕ ತಂತ್ರಜ್ಞಾನ ಜಾರಿಗೆ ಬರಲಿದ್ದು, ಇದರಿಂದ ವಾಹನಗಳು ಎಲ್ಲೂ ನಿಲ್ಲದೆ ವೇಗವಾಗಿ ಚಲಿಸಬಹುದಾಗಿದೆ.

​ಈ ನೂತನ ವ್ಯವಸ್ಥೆಯಲ್ಲಿ ಹೆದ್ದಾರಿಗಳ ಮೇಲ್ಭಾಗದಲ್ಲಿ ಅಳವಡಿಸಲಾದ ವಿಶೇಷ ಹೈ-ಟೆಕ್ ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳು ವಾಹನವು ಚಲಿಸುತ್ತಿರುವಾಗಲೇ ಅದರ ನಂಬರ್ ಪ್ಲೇಟ್ ಹಾಗೂ ಫಾಸ್ಟ್‌ಟ್ಯಾಗ್ ಮಾಹಿತಿಯನ್ನು ಸ್ವಯಂಚಾಲಿತವಾಗಿ ಗುರುತಿಸುತ್ತವೆ. ವಾಹನ ಸವಾರರು ತಾವು ಪ್ರಯಾಣಿಸಿದ ನಿಖರ ದೂರಕ್ಕೆ ಮಾತ್ರ ಹಣ ಪಾವತಿಸುವ 'ಪೇ ಆಸ್ ಯು ಯೂಸ್' ಮಾದರಿ ಇದಾಗಿದ್ದು, ಟೋಲ್ ಮೊತ್ತವು ನೇರವಾಗಿ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳಲಿದೆ. ಇದರಿಂದ ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ವಾಹನ ದಟ್ಟಣೆ ಮತ್ತು ಸಮಯ ವ್ಯರ್ಥವಾಗುವ ಸಮಸ್ಯೆಗಳಿಗೆ ಪೂರ್ಣವಿರಾಮ ಬೀಳಲಿದೆ.

​ವಾಹನಗಳು ಟೋಲ್ ಬಳಿ ನಿಲ್ಲುವ ಅಗತ್ಯವಿಲ್ಲದ ಕಾರಣ ಇಂಧನ ಉಳಿತಾಯವಾಗುವುದಲ್ಲದೆ, ಪರಿಸರ ಮಾಲಿನ್ಯವೂ ತಗ್ಗಲಿದೆ. ವಿಶೇಷವಾಗಿ ದೂರ ಪ್ರಯಾಣ ಮಾಡುವವರಿಗೆ ಮತ್ತು ಸರಕು ಸಾಗಣೆ ವಾಹನಗಳಿಗೆ ಈ ವ್ಯವಸ್ಥೆ ವರದಾನವಾಗಲಿದೆ. ಫಾಸ್ಟ್‌ಟ್ಯಾಗ್ ಬಳಕೆ ಈ ವ್ಯವಸ್ಥೆಯಲ್ಲೂ ಮುಂದುವರಿಯಲಿದ್ದು, ಒಂದು ವೇಳೆ ಖಾತೆಯಲ್ಲಿ ಹಣವಿಲ್ಲದಿದ್ದರೆ 72 ಗಂಟೆಯೊಳಗೆ ಪಾವತಿಸಲು ಅವಕಾಶ ನೀಡಲಾಗುತ್ತದೆ; ತಪ್ಪಿದಲ್ಲಿ ದ್ವಿಗುಣ ದಂಡ ವಿಧಿಸುವ ಕಟ್ಟುನಿಟ್ಟಿನ ನಿಯಮವನ್ನೂ ಜಾರಿಗೆ ತರಲಾಗುತ್ತಿದೆ. ಈಗಾಗಲೇ ದೇಶದ ಕೆಲವು ಭಾಗಗಳಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿರುವ ಈ ತಂತ್ರಜ್ಞಾನವು ಶೀಘ್ರದಲ್ಲೇ ಬೆಂಗಳೂರು-ಚೆನ್ನೈ ಹಾಗೂ ದೆಹಲಿ-ಜೈಪುರ ಅತಿವೇಗದ ಹೆದ್ದಾರಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ.

Category
ಕರಾವಳಿ ತರಂಗಿಣಿ