ನವದೆಹಲಿ : ಮುಂಬರುವ ಜನಗಣತಿಯ ನಂತರ ಭಾರತದಲ್ಲಿನ ಮುಸ್ಲಿಮರ ಜನಸಂಖ್ಯೆಯು ಇಂಡೋನೇಷ್ಯಾದ ಒಟ್ಟು ಜನಸಂಖ್ಯೆಗೆ ಸಮನಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಕೊನೆಯ ಬಾರಿಗೆ 2011ರಲ್ಲಿ ಜನಗಣತಿ ನಡೆದಿದ್ದು, 2021ರಲ್ಲಿ ವಿವಿಧ ಕಾರಣಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ. ದಶಕಕ್ಕೂ ಹೆಚ್ಚು ಕಾಲದಿಂದ ಜನಗಣತಿ ನಡೆಯದ ಹಿನ್ನೆಲೆಯಲ್ಲಿ, ಪ್ರಸ್ತುತ ಮುಸ್ಲಿಂ ಸಮುದಾಯದ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ದೇಶದ ಅಲ್ಪಸಂಖ್ಯಾತ ಸಮುದಾಯಗಳ ಸ್ಥಿತಿಗತಿಯ ಬಗ್ಗೆ ಮಾತನಾಡಿದ ಸಚಿವರು, ಪಾರ್ಸಿ ಸಮುದಾಯದ ಜನಸಂಖ್ಯೆ ಕುಸಿಯುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು. ಪ್ರಸ್ತುತ ಭಾರತದಲ್ಲಿ ಪಾರ್ಸಿಗಳ ಸಂಖ್ಯೆ ಕೇವಲ 52 ರಿಂದ 55 ಸಾವಿರದಷ್ಟಿದೆ. ಇದು ದೇಶದ ಅತಿ ಸಣ್ಣ ಅಲ್ಪಸಂಖ್ಯಾತ ಸಮುದಾಯವಾಗಿದ್ದು, ಅವರ ಅಸ್ತಿತ್ವದ ರಕ್ಷಣೆಗಾಗಿ ಮತ್ತು ಜನಸಂಖ್ಯೆಯನ್ನು ವೃದ್ಧಿಸಲು ಸರ್ಕಾರವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಭರವಸೆ ನೀಡಿದರು. ಜನಸಂಖ್ಯೆಯ ಏರಿಳಿತಗಳ ಏನೇ ಇದ್ದರೂ, ಅಂತಿಮವಾಗಿ ಯಾವುದೇ ಸಮುದಾಯದವರಾಗಲಿ ಅವರೆಲ್ಲರೂ ಭಾರತೀಯರೇ ಎಂಬ ಭಾವನೆ ಮುಖ್ಯ ಎಂದು ರಿಜಿಜು ಇದೇ ವೇಳೆ ಪ್ರತಿಪಾದಿಸಿದರು.