ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕೋಲ್ಕತ್ತಾದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ಭದ್ರತೆಯ ಬಗ್ಗೆ ಮಹತ್ವದ ಭರವಸೆಗಳನ್ನು ನೀಡಿದ್ದಾರೆ. ಇನ್ನು ಮುಂದೆ ಬಂಗಾಳದಲ್ಲಿ ಅಕ್ರಮ ಒಳನುಸುಳುವಿಕೆ ಮತ್ತು ಗೋವುಗಳ ಕಳ್ಳಸಾಗಣೆ ಸಂಪೂರ್ಣವಾಗಿ ಬಂದ್ ಆಗಲಿದೆ ಎಂದು ಅವರು ಗುಡುಗಿದ್ದಾರೆ. ಈ ಗೆಲುವು ಕೇವಲ ಒಂದು ಪಕ್ಷದ ಅಧಿಕಾರ ವಿಸ್ತರಣೆಯಲ್ಲ, ಬದಲಾಗಿ ರಾಷ್ಟ್ರೀಯ ಭದ್ರತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮರುಸ್ಥಾಪಿಸಲು ಜನತೆ ನೀಡಿದ ಆದೇಶವಾಗಿದೆ ಎಂದು ಅವರು ಬಣ್ಣಿಸಿದರು. ದೇಶದ ಪ್ರತಿ ಒಳನುಸುಳುಕೋರನನ್ನು ಪತ್ತೆ ಹಚ್ಚಿ ಹೊರಗಟ್ಟುವ ಸಂಕಲ್ಪವನ್ನು ಪುನರುಚ್ಚರಿಸಿದ ಶಾ, ಇದು ರಾಜಕೀಯ ಧ್ರುವೀಕರಣವಲ್ಲ, ಬದಲಾಗಿ ರಾಷ್ಟ್ರದ ರಕ್ಷಣೆಯಾಗಿದೆ ಎಂದು ಸ್ಪಷ್ಟಪಡಿಸಿದರು. ಕಳೆದ 15 ವರ್ಷಗಳ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಆಡಳಿತವು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಿತ್ತು ಎಂದು ಅವರು ತೀವ್ರ ವಾಗ್ಧಾಳಿ ನಡೆಸಿದರು.
ಮತ್ತೊಂದೆಡೆ, ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ 'ದೈತ್ಯ ಸಂಹಾರಿ' ಸುವೇಂದು ಅಧಿಕಾರಿ ಆಯ್ಕೆಯಾಗಿದ್ದು, ರಾಜ್ಯದಲ್ಲಿ ಎರಡು ದಶಕಗಳ ಬಳಿಕ ಉಪಮುಖ್ಯಮಂತ್ರಿಗಳ ಹುದ್ದೆ ಕೂಡ ಸೃಷ್ಟಿಯಾಗುವ ಸಾಧ್ಯತೆ ಇದೆ. 2021ರಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯವರನ್ನು ಸೋಲಿಸಿದ್ದ ಸುವೇಂದು, ಈ ಬಾರಿ ಭಬಾನಿಪುರದಲ್ಲೂ ದೀದಿಯವರನ್ನು ಮಣಿಸಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಕಾರಣರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಭಯದ ವಾತಾವರಣ ಅಂತ್ಯವಾಗಿದ್ದು, ಪ್ರಧಾನಿ ಮೋದಿಯವರ ಆಶಯದಂತೆ ಭರವಸೆಯ ಯುಗ ಆರಂಭವಾಗಿದೆ ಎಂದು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದೊಂದಿಗೆ ಬಂಗಾಳದ ಅಭಿವೃದ್ಧಿಗೆ ಶ್ರಮಿಸಲಿವೆ ಎಂದು ಅವರು ಆಶ್ವಾಸನೆ ನೀಡಿದರು. ಈ ಬೆಳವಣಿಗೆಯೊಂದಿಗೆ 1999-2000ರ ನಂತರ ರಾಜ್ಯದಲ್ಲಿ ಮತ್ತೆ ಉಪಮುಖ್ಯಮಂತ್ರಿಗಳ ಆಡಳಿತಾತ್ಮಕ ಬದಲಾವಣೆಯೂ ಕಂಡುಬರಲಿದೆ.