ಮುಂಬೈ : ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 42 ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಇವರನ್ನು ಛತ್ರಪತಿ ಸಂಭಾಜಿನಗರದಲ್ಲಿ ವಿಶೇಷ ತನಿಖಾ ತಂಡ (SIT) ವಶಕ್ಕೆ ಪಡೆದಿದೆ.
ಡಿಯೋಲಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 156/26 ರ ಅಡಿಯಲ್ಲಿ ನಿದಾ ಖಾನ್ ಅವರ ಹೆಸರಿದ್ದು, ಮಾರ್ಚ್ 26 ರಿಂದ ಇವರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಎಫ್‌ಐಆರ್ ದಾಖಲಾದ ಕೂಡಲೇ ತಲೆಮರೆಸಿಕೊಂಡಿದ್ದ ಇವರ ಬಂಧನಕ್ಕಾಗಿ ಎಸಿಪಿ ಸಂದೀಪ್ ಮಿಟ್ಕೆ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿತ್ತು. ನಿದಾ ಖಾನ್ ಅವರನ್ನು ಶುಕ್ರವಾರ ನಾಶಿಕ್‌ಗೆ ಕರೆತಂದು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಸಿಕ್‌ನ ಈ ಪ್ರಖ್ಯಾತ ಐಟಿ ಕಂಪನಿಯ ಘಟಕದಲ್ಲಿ ಕೆಲಸದ ಸ್ಥಳದಲ್ಲಿ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಹಾಗೂ ಬಲವಂತವಾಗಿ ಧಾರ್ಮಿಕ ಮತಾಂತರಕ್ಕೆ ಯತ್ನಿಸಿದ ಒಟ್ಟು ಒಂಬತ್ತು ಪ್ರಕರಣಗಳನ್ನು ಎಸ್‌ಐಟಿ ತನಿಖೆ ಮಾಡುತ್ತಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಒಟ್ಟು ಎಂಟು ಜನರನ್ನು ಬಂಧಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ನಿದಾ ಖಾನ್ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಉದ್ಯೋಗಿಗಳಿಗೆ ಇಸ್ಲಾಮಿಕ್ ಧಾರ್ಮಿಕ ಆಚರಣೆಗಳನ್ನು ಅನುಸರಿಸುವಂತೆ ಒತ್ತಾಯಿಸಿದ ಆರೋಪ ಎದುರಿಸುತ್ತಿದ್ದಾರೆ. ಮಹಿಳಾ ಉದ್ಯೋಗಿಗಳಿಗೆ ಮುಸ್ಲಿಂ ಸಂಪ್ರದಾಯದಂತೆ ಉಡುಗೆ ಧರಿಸಲು, ಪ್ರಾರ್ಥನೆ ಸಲ್ಲಿಸಲು ಮತ್ತು ಮಾಂಸಾಹಾರ ಸೇವಿಸಲು ಮಾನಸಿಕವಾಗಿ ಒತ್ತಡ ಹೇರಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ನಿದಾ ಖಾನ್ ಅವರನ್ನು ಸುದೀರ್ಘ ಕಾಲ ವಿಚಾರಣೆ ನಡೆಸುವ ಅಗತ್ಯವಿದ್ದು, ಈ ಜಾಲದಲ್ಲಿ ಇನ್ನಷ್ಟು ಜನರ ಕೈವಾಡವಿರುವ ಬಗ್ಗೆ ತನಿಖೆ ಮುಂದುವರಿದಿದೆ.