image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪಂಜಾಬ್‌ನಲ್ಲಿ ಅವಳಿ ಬಾಂಬ್ ಸ್ಫೋಟ: ಬಿಜೆಪಿ ವಿರುದ್ಧ ಸಿಎಂ ಭಗವಂತ್ ಮಾನ್ ಗಂಭೀರ ಆರೋಪ, ರಾಜ್ಯಾದ್ಯಂತ ಹೈ ಅಲರ್ಟ್

ಪಂಜಾಬ್‌ನಲ್ಲಿ ಅವಳಿ ಬಾಂಬ್ ಸ್ಫೋಟ: ಬಿಜೆಪಿ ವಿರುದ್ಧ ಸಿಎಂ ಭಗವಂತ್ ಮಾನ್ ಗಂಭೀರ ಆರೋಪ, ರಾಜ್ಯಾದ್ಯಂತ ಹೈ ಅಲರ್ಟ್

ಚಂಡೀಗಢ : ಪಂಜಾಬ್‌ನ ಜಲಂಧರ್ ಮತ್ತು ಅಮೃತಸರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಎರಡು ಪ್ರತ್ಯೇಕ ಬಾಂಬ್ ಸ್ಫೋಟಗಳು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿವೆ. ಈ ಘಟನೆಗಳ ಬೆನ್ನಲ್ಲೇ ರಾಜ್ಯದಲ್ಲಿ ಭದ್ರತಾ ಕಳವಳ ಎದುರಾಗಿದ್ದು, ಸರ್ಕಾರ ಹೈ ಅಲರ್ಟ್ ಘೋಷಿಸಿದೆ. ಈ ನಡುವೆ, ಈ ಸ್ಫೋಟಗಳ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ. 2027ರ ವಿಧಾನಸಭಾ ಚುನಾವಣೆಯ ಸಿದ್ಧತೆಗಾಗಿ ಬಿಜೆಪಿ ಇಂತಹ ಕೃತ್ಯಗಳನ್ನು ಎಸಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

​ಬಿಜೆಪಿಯು ಎಲ್ಲೆಲ್ಲಿ ಸ್ಪರ್ಧಿಸಲು ಬಯಸುತ್ತದೋ ಅಲ್ಲೆಲ್ಲಾ ಇಂತಹ ಅಹಿತಕರ ಘಟನೆಗಳು ಸಂಭವಿಸುತ್ತವೆ ಎಂದು ವಾಗ್ದಾಳಿ ನಡೆಸಿದ ಸಿಎಂ ಮಾನ್, "ಇಂತಹ ಕೃತ್ಯಗಳನ್ನು ಕೂಡಲೇ ನಿಲ್ಲಿಸಿ. ಈ ಸ್ಫೋಟಗಳು ಪಂಜಾಬ್ ಚುನಾವಣೆಗೆ ಬಿಜೆಪಿ ನಡೆಸುತ್ತಿರುವ ಸಿದ್ಧತೆಗಳ ಭಾಗವಾಗಿದೆ" ಎಂದು ದೂರಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೇಸರಿ ಅಲೆ ಬೀಸುವ ಮುನ್ನ ಪಂಜಾಬ್ ಬಿಜೆಪಿ ಘಟಕವು 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದ "ಮುಂದಿನದ್ದು ಪಂಜಾಬ್" ಎಂಬ ಸಾಲುಗಳನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಮುಂದಿನ ವರ್ಷದ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ತನ್ನ ಕಾರ್ಯತಂತ್ರದ ಭಾಗವಾಗಿ ಇಂತಹ ಘಟನೆಗಳನ್ನು ಪ್ರಚೋದಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

​ಮೊದಲ ಸ್ಫೋಟವು ಜಲಂಧರ್‌ನಲ್ಲಿರುವ ಗಡಿ ಭದ್ರತಾ ಪಡೆ (BSF) ಕೇಂದ್ರ ಕಚೇರಿಯ ಮುಖ್ಯ ದ್ವಾರದ ಬಳಿ ಸಂಭವಿಸಿದೆ. ಇಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಒಂದರಲ್ಲಿ ಸ್ಫೋಟ ಸಂಭವಿಸಿದ್ದು, ತೀವ್ರತೆಗೆ ಸಮೀಪದ ಅಂಗಡಿಗಳ ಗೋಡೆಗಳು ಬಿರುಕು ಬಿಟ್ಟಿವೆ. ಈ ಬಗ್ಗೆ ಮಾಹಿತಿ ನೀಡಿರುವ ಜಲಂಧರ್ ಪೊಲೀಸ್ ಕಮಿಷನರ್ ಧನ್‌ಪ್ರೀತ್ ಕೌರ್, ಸ್ಕೂಟರ್ ಸ್ಫೋಟದ ಬಗ್ಗೆ ತನಿಖೆ ತೀವ್ರಗೊಂಡಿದೆ ಎಂದು ತಿಳಿಸಿದ್ದಾರೆ.

​ಈ ಘಟನೆ ನಡೆದ ಕೇವಲ ಎರಡು ಗಂಟೆಗಳ ಅಂತರದಲ್ಲಿ, ಸುಮಾರು 100 ಕಿಲೋಮೀಟರ್ ದೂರದ ಅಮೃತಸರದ ಅಟ್ಟಾರಿ ರಸ್ತೆ ಸಮೀಪವಿರುವ ಸೇನೆಯ 'ಖಾಸಾ ಕ್ಯಾಂಪ್' ಬಳಿ ಮತ್ತೊಂದು ಸ್ಫೋಟ ಸಂಭವಿಸಿದೆ. ಅಪರಿಚಿತ ವ್ಯಕ್ತಿಗಳು ಸೇನಾ ನೆಲೆಯ ಗೋಡೆಯ ಮೇಲೆ ಸ್ಫೋಟಕಗಳನ್ನು ಎಸೆದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಹೇಲ್ ಖಾಸಿಂ ಮಾಹಿತಿ ನೀಡಿದ್ದಾರೆ. ಅದೃಷ್ಟವಶಾತ್, ಎರಡೂ ಸ್ಫೋಟಗಳಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳು ಸಂಭವಿಸಿಲ್ಲ. ಸದ್ಯ ಪಂಜಾಬ್ ಪೊಲೀಸರು ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳು ಈ ಅವಳಿ ಸ್ಫೋಟಗಳ ಬಗ್ಗೆ ಆಳವಾದ ತನಿಖೆ ಆರಂಭಿಸಿದ್ದು, ರಾಜ್ಯದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Category
ಕರಾವಳಿ ತರಂಗಿಣಿ