ನವದೆಹಲಿ : 2036ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಭಾರತದ ಮಹತ್ವಾಕಾಂಕ್ಷೆಯ ಯೋಜನೆಗೆ ದೇಶದಲ್ಲಿ ಹೆಚ್ಚುತ್ತಿರುವ ಡೋಪಿಂಗ್ ಪ್ರಕರಣಗಳು ದೊಡ್ಡ ಮಟ್ಟದ ಹಿನ್ನಡೆ ತರುವ ಸಾಧ್ಯತೆಯಿದೆ. ಭಾರತದಲ್ಲಿ ಕ್ರೀಡಾಪಟುಗಳು ಉದ್ದೀಪನ ಮದ್ದು ಪರೀಕ್ಷೆಯಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿರುವುದು ಮತ್ತು ಪರೀಕ್ಷೆಯ ಬಗ್ಗೆ ಮೊದಲೇ ಮಾಹಿತಿ ಸೋರಿಕೆಯಾಗುತ್ತಿರುವ ಬಗ್ಗೆ ಅಂತರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ITA) ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಕುರಿತು ವರದಿ ನೀಡಿರುವ ಐಟಿಎ ಮಹಾನಿರ್ದೇಶಕ ಬೆಂಜಮಿನ್ ಕೋಹೆನ್ ಅವರು, ಭಾರತವು ಒಲಿಂಪಿಕ್ ಆತಿಥ್ಯ ವಹಿಸಲು ಬಯಸುವುದಾದರೆ ತನ್ನ ಕ್ರೀಡಾ ಆಡಳಿತ ವ್ಯವಸ್ಥೆಯಲ್ಲಿ ತಕ್ಷಣವೇ ಅಮೂಲಾಗ್ರ ಸುಧಾರಣೆಗಳನ್ನು ತರಬೇಕೆಂದು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ ಎಂದು ತಿಳಿಸಿದ್ದಾರೆ. ವಿಶೇಷವಾಗಿ ಪರೀಕ್ಷಾ ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಕ್ರೀಡಾಪಟುಗಳು ಓಡಿ ಹೋಗುತ್ತಿರುವ ಘಟನೆಗಳು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತರುತ್ತಿವೆ.
ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆಯ (WADA) ಅಂಕಿಅಂಶಗಳ ಪ್ರಕಾರ, ಕಳೆದ ಮೂರು ವರ್ಷಗಳಿಂದ ಡೋಪಿಂಗ್ ನಿಯಮ ಉಲ್ಲಂಘಿಸುವವರ ಪಟ್ಟಿಯಲ್ಲಿ ಭಾರತ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಭಾರತವು ಅತಿ ಹೆಚ್ಚು ಉದ್ದೀಪನ ಮದ್ದು ಮತ್ತು ಸ್ಟಿರಾಯ್ಡ್‌ಗಳನ್ನು ಉತ್ಪಾದಿಸುವ ದೇಶವಾಗಿ ಮಾರ್ಪಡುತ್ತಿರುವುದರ ಬಗ್ಗೆ ವಾಡಾ ಅಧ್ಯಕ್ಷ ವಿಟೋಲ್ಡ್ ಬಂಕಾ ಇತ್ತೀಚೆಗಷ್ಟೇ ಎಚ್ಚರಿಸಿದ್ದರು. ತನ್ನ ವ್ಯವಸ್ಥೆಯಲ್ಲಿನ ವೈಫಲ್ಯಗಳು ಜಗತ್ತಿಗೆ ತಿಳಿಯಬಹುದು ಎಂಬ ಆತಂಕದಿಂದ ಭಾರತವು ಅಂತರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಪಾರದರ್ಶಕವಾಗಿ ಸಹಕರಿಸಲು ಹಿಂಜರಿಯುತ್ತಿದೆ ಎಂದು ಕೋಹೆನ್ ಅಭಿಪ್ರಾಯಪಟ್ಟಿದ್ದಾರೆ. 2030ರ ಕಾಮನ್‌ವೆಲ್ತ್ ಮತ್ತು 2036ರ ಒಲಿಂಪಿಕ್ಸ್‌ಗಾಗಿ ಅಹಮದಾಬಾದ್ ಅನ್ನು ಸಜ್ಜುಗೊಳಿಸುತ್ತಿರುವ ಭಾರತಕ್ಕೆ, ಪ್ರಬಲ ಪೈಪೋಟಿದಾರನಾಗಿರುವ ದೋಹಾ ನಗರವು ಸವಾಲೊಡ್ಡುತ್ತಿದೆ. ಭಾರತೀಯ ಕ್ರೀಡಾ ಸಚಿವಾಲಯ ಮತ್ತು ಒಲಿಂಪಿಕ್ ಸಂಸ್ಥೆ (IOA) ಸುಧಾರಣೆಗೆ ಆಸಕ್ತಿ ತೋರುತ್ತಿದ್ದರೂ, ಅಂತರಾಷ್ಟ್ರೀಯ ಮಾನದಂಡದ ಪಾರದರ್ಶಕ ಪರೀಕ್ಷಾ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದ್ದು, ಡೋಪಿಂಗ್ ಮುಕ್ತ ಕ್ರೀಡಾ ಪರಿಸರ ನಿರ್ಮಿಸಿದರೆ ಮಾತ್ರ ಭಾರತದ ಒಲಿಂಪಿಕ್ ಕನಸು ನನಸಾಗಲು ಸಾಧ್ಯವಾಗಲಿದೆ.