ಮಹಾರಾಷ್ಟ್ರ : ನಾಸಿಕ್‌ನಲ್ಲಿರುವ ಟಿಸಿಎಸ್ ಐಟಿ ಕಂಪನಿಯ ಮಹಿಳಾ ಉದ್ಯೋಗಿಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಮತಾಂತರ ಯತ್ನ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್‌ಗೆ ಸ್ಥಳೀಯ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ. ತಲೆಮರೆಸಿಕೊಂಡಿರುವ ನಿದಾ ಖಾನ್ ಬಂಧನ ಭೀತಿಯಿಂದ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನಾಸಿಕ್ ನ್ಯಾಯಾಲಯವು, ಆರೋಪಗಳ ಗಂಭೀರತೆಯನ್ನು ಪರಿಗಣಿಸಿ ಈ ಮಹತ್ವದ ತೀರ್ಪು ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಶೇಷ ತನಿಖಾ ದಳ (SIT) ಏಳು ಮಂದಿಯನ್ನು ಬಂಧಿಸಿದ್ದು, ನಿದಾ ಖಾನ್ ಪತಿಯನ್ನೂ ಏಪ್ರಿಲ್ 18 ರಂದು ವಶಕ್ಕೆ ಪಡೆಯಲಾಗಿತ್ತು. ನಿದಾ ಖಾನ್ ಗರ್ಭಿಣಿಯಾಗಿದ್ದು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಆಧಾರದ ಮೇಲೆ ಆಕೆಯ ಪರ ವಕೀಲರು ಜಾಮೀನು ಕೋರಿದ್ದರೂ, ಸರ್ಕಾರಿ ಅಭಿಯೋಜಕರು ಇದು ಸುಳ್ಳು ಮಾಹಿತಿ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿಂದೆ ಏಪ್ರಿಲ್ 27 ರಂದು ತೀರ್ಪನ್ನು ಕಾಯ್ದಿರಿಸಿದ್ದ ಪೀಠವು, ಇಂದು ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಇದೇ ವೇಳೆ ಟಿಸಿಎಸ್ ಕಂಪನಿಯು ಸ್ಪಷ್ಟನೆ ನೀಡಿದ್ದು, ನಿದಾ ಖಾನ್ ಹೆಚ್‌ಆರ್ ಮ್ಯಾನೇಜರ್ ಆಗಿರಲಿಲ್ಲ, ಬದಲಿಗೆ ಪ್ರೊಸೆಸ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದೆ. ಸದ್ಯ ಕೋರ್ಟ್ ತೀರ್ಪಿನ ಬೆನ್ನಲ್ಲೇ ಪೊಲೀಸರು ನಿದಾ ಖಾನ್ ಬಂಧನಕ್ಕೆ ಬಲೆ ಬೀಸಿದ್ದು, ಇತ್ತ ಆರೋಪಿ ಪರ ವಕೀಲರು ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಪ್ರಕರಣದ ತನಿಖೆ ಈಗ ಮತ್ತಷ್ಟು ತೀವ್ರಗೊಂಡಿದೆ.