ನವದೆಹಲಿ : ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನ ಪ್ರಯತ್ನದಲ್ಲಿ ಮುಖಭಂಗ ಅನುಭವಿಸಿರುವ ಪಾಕಿಸ್ತಾನದ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಅಸೀಂ ಮುನೀರ್, ಈಗ ಹತಾಶೆಯಿಂದ ಭಾರತದ ವಿರುದ್ಧ ಮತ್ತೆ ವಿಷ ಕಾರಲು ಆರಂಭಿಸಿದ್ದಾನೆ. ತನ್ನ ವೈಯಕ್ತಿಕ ಇಮೇಜ್ ಹೆಚ್ಚಿಸಿಕೊಳ್ಳುವ ಹಾಗೂ ಪಾಕಿಸ್ತಾನದ ಅಧ್ಯಕ್ಷ ಗಾದಿ ಏರುವ ದುರಾಲೋಚನೆಯಿಂದ ಕಾಶ್ಮೀರದಲ್ಲಿ ಮತ್ತೊಂದು ಭೀಕರ ದಾಳಿಗೆ ಈತ ಸಂಚು ರೂಪಿಸಿದ್ದಾನೆ ಎಂದು ಭದ್ರತಾ ಪಡೆಗಳು ಗಂಭೀರ ಎಚ್ಚರಿಕೆ ನೀಡಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಶಾಂತಿ ಸಂಧಾನಕಾರ' ಎಂಬ ಹಣೆಪಟ್ಟಿ ಹಚ್ಚಿಕೊಳ್ಳಲು ಅಮೆರಿಕ-ಇರಾನ್ ನಡುವೆ ಮಧ್ಯಸ್ಥಿಕೆ ವಹಿಸಿದ್ದ ಮುನೀರ್‌ಗೆ ಅಲ್ಲಿ ಸಾಫಲ್ಯ ಸಿಕ್ಕಿಲ್ಲ. ಈ ವೈಫಲ್ಯದಿಂದ ಕಂಗೆಟ್ಟಿರುವ ಆತ, ಈಗ ಅಮೆರಿಕದ ಗಮನ ಸೆಳೆಯಲು ಕಾಶ್ಮೀರ ವಿಷಯವನ್ನು ದಾಳವಾಗಿ ಬಳಸಿಕೊಳ್ಳಲು ಮುಂದಾಗಿದ್ದಾನೆ. ಕಾಶ್ಮೀರದಲ್ಲಿ ಅಸ್ಥಿರತೆ ನಿರ್ಮಿಸುವ ಮೂಲಕ ಅಮೆರಿಕದ ಜೊತೆಗಿನ ಸಂಬಂಧ ಬಲಪಡಿಸಿಕೊಳ್ಳುವುದು ಹಾಗೂ ಆ ಮೂಲಕ ತನ್ನ ರಾಜಕೀಯ ಹಾದಿ ಸುಗಮಗೊಳಿಸಿಕೊಳ್ಳುವುದು ಮುನೀರ್ ಲೆಕ್ಕಾಚಾರವಾಗಿದೆ.
ಈ ಕುತಂತ್ರಕ್ಕಾಗಿ ಪಾಕಿಸ್ತಾನ ಎರಡು ಭೀಕರ ಯೋಜನೆಗಳನ್ನು ಸಿದ್ಧಪಡಿಸಿದೆ. ಮೊದಲನೆಯದಾಗಿ, ಕಾಶ್ಮೀರದ ಸ್ಥಳೀಯ ಭಯೋತ್ಪಾದಕ ಜಾಲವನ್ನು ಸಕ್ರಿಯಗೊಳಿಸಿ ಪ್ರವಾಸೋದ್ಯಮಕ್ಕೆ ಪೆಟ್ಟು ನೀಡುವುದು ಹಾಗೂ ಭಾರತೀಯ ಭದ್ರತಾ ಪಡೆಗಳ ಗಮನ ಚದುರಿಸುವುದು. ಎರಡನೆಯದಾಗಿ, ಪಾಕಿಸ್ತಾನಿ ಮೂಲದ ಉಗ್ರರನ್ನು ಬಳಸಿಕೊಂಡು ಗಡಿಯಾಚೆಯಿಂದ ನೇರ ದಾಳಿ ನಡೆಸಿ ರಕ್ತಪಾತ ಮಾಡುವುದು ಈ ಯೋಜನೆಯ ಭಾಗವಾಗಿದೆ. ಪಾಕಿಸ್ತಾನದ ಆಂತರಿಕ ರಾಜಕೀಯದಲ್ಲಿ ಮಿಲಿಟರಿ ಪ್ರಭಾವ ಕುಸಿಯುತ್ತಿರುವ ಹೊತ್ತಲ್ಲೇ, ಮುನೀರ್ ತನ್ನನ್ನು ತಾನು ಪ್ರಬಲ ನಾಯಕ ಎಂದು ಬಿಂಬಿಸಿಕೊಳ್ಳಲು ಕಾಶ್ಮೀರವನ್ನು ಅಸ್ತ್ರವಾಗಿಸಿಕೊಂಡಿದ್ದಾನೆ. ಜಾಗತಿಕ ರಾಜನೀತಿಜ್ಞನಾಗುವ ಆಸೆ ಕೈಗೂಡದ ಹಿನ್ನೆಲೆಯಲ್ಲಿ, ಗಡಿಯಲ್ಲಿ ಸಂಘರ್ಷ ಸೃಷ್ಟಿಸಿ ಅಂತಾರಾಷ್ಟ್ರೀಯ ಸಮುದಾಯದ ಮಧ್ಯಸ್ಥಿಕೆಗೆ ಒತ್ತಾಯಿಸುವುದು ಆತನ ಕುತಂತ್ರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ವರದಿಯಾಗಿದೆ.