image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪಶ್ಚಿಮ ಬಂಗಾಳ ಮತ ಎಣಿಕೆ: ಟಿಎಂಸಿ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್, ಮಮತಾ ಬ್ಯಾನರ್ಜಿಗೆ ಹಿನ್ನಡೆ

ಪಶ್ಚಿಮ ಬಂಗಾಳ ಮತ ಎಣಿಕೆ: ಟಿಎಂಸಿ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್, ಮಮತಾ ಬ್ಯಾನರ್ಜಿಗೆ ಹಿನ್ನಡೆ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮತ ಎಣಿಕೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ಹಾಗೂ ಸಾರ್ವಜನಿಕ ವಲಯದ (ಪಿಎಸ್‌ಯು) ನೌಕರರನ್ನು ಮಾತ್ರ ಮೇಲ್ವಿಚಾರಕರನ್ನಾಗಿ ನಿಯೋಜಿಸುವುದನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಸುಪ್ರೀಂಕೋರ್ಟ್‌ನ ಈ ಮಹತ್ವದ ತೀರ್ಪಿನಿಂದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾರೀ ಮುಖಭಂಗವಾಗಿದ್ದು, ಚುನಾವಣಾ ಆಯೋಗದ ನಿರ್ಧಾರಕ್ಕೆ ನ್ಯಾಯಾಲಯವು ಗ್ರೀನ್ ಸಿಗ್ನಲ್ ನೀಡಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೋಯಲ್ಯ ಬಾಗ್ಚಿ ಅವರನ್ನೊಳಗೊಂಡ ವಿಶೇಷ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಸುಪ್ರೀಂಕೋರ್ಟ್‌ಗೆ ರಜೆ ಇದ್ದಾಗ್ಯೂ, ವಿಷಯದ ಗಂಭೀರತೆಯನ್ನು ಪರಿಗಣಿಸಿ ವಿಶೇಷ ವಿಚಾರಣೆ ನಡೆಸಲಾಗಿತ್ತು. ಚುನಾವಣಾ ಆಯೋಗದ ಸುತ್ತೋಲೆಯು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಮತ್ತು ಆಯೋಗದ ಕಾರ್ಯವಿಧಾನದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಬಲವಾದ ಆಧಾರಗಳಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಮತ ಎಣಿಕೆ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಥವಾ ಪಿಎಸ್‌ಯು ನೌಕರರನ್ನು ನೇಮಿಸಿಕೊಳ್ಳುವ ಪೂರ್ಣ ಅಧಿಕಾರ ಆಯೋಗಕ್ಕಿದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

​ಟಿಎಂಸಿ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಾದ ಮಂಡಿಸಿ, ಕೇವಲ ಕೇಂದ್ರದ ನೌಕರರನ್ನು ಮಾತ್ರ ನಿಯೋಜಿಸುವುದು ಪಕ್ಷಪಾತಕ್ಕೆ ದಾರಿ ಮಾಡಿಕೊಡಬಹುದು ಮತ್ತು ಇದು ರಾಜ್ಯ ಸರ್ಕಾರಿ ನೌಕರರನ್ನು ಕಡೆಗಣಿಸಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಬಾಗ್ಚಿ ಅವರು, ಚುನಾವಣಾ ಆಯೋಗದ ಕೈಪಿಡಿಯ ಪ್ರಕಾರ ಕೇಂದ್ರ ಅಥವಾ ರಾಜ್ಯದ ಯಾವುದೇ ನೌಕರರನ್ನು ನೇಮಿಸಬಹುದು. ಇದರಲ್ಲಿ ರಾಜಕೀಯ ಪಕ್ಷಗಳ ಒಪ್ಪಿಗೆಯ ಅಗತ್ಯವಿಲ್ಲ ಮತ್ತು ಮತ ಎಣಿಕೆಯ ವೇಳೆ ಎಲ್ಲಾ ಪಕ್ಷಗಳ ಏಜೆಂಟ್‌ಗಳು ಇರುವುದರಿಂದ ಅಕ್ರಮಕ್ಕೆ ಅವಕಾಶವಿರುವುದಿಲ್ಲ ಎಂದು ಹೇಳಿದರು. ಈ ಮೊದಲು ಕೋಲ್ಕತ್ತಾ ಹೈಕೋರ್ಟ್ ಕೂಡ ಚುನಾವಣಾ ಆಯೋಗದ ನಿರ್ಧಾರವನ್ನು ಎತ್ತಿ ಹಿಡಿದಿತ್ತು. ಇದೀಗ ಸುಪ್ರೀಂಕೋರ್ಟ್ ಕೂಡ ಅದೇ ನಿಲುವನ್ನು ತಾಳಿರುವುದರಿಂದ ಟಿಎಂಸಿಗೆ ಎರಡನೇ ಬಾರಿಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾದಂತಾಗಿದೆ. ಸೋಮವಾರ ನಡೆಯಲಿರುವ ಮತ ಎಣಿಕೆ ಪ್ರಕ್ರಿಯೆಯು ಈಗ ಚುನಾವಣಾ ಆಯೋಗದ ನಿರ್ದೇಶನದಂತೆಯೇ ಕೇಂದ್ರ ಸರ್ಕಾರಿ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಯಲಿದೆ. ಇದರಿಂದಾಗಿ ಮತ ಎಣಿಕೆ ಪ್ರಕ್ರಿಯೆಯು ಪಾರದರ್ಶಕವಾಗಿ ಮತ್ತು ನಿಯಮಾನುಸಾರ ನಡೆಯಲಿದೆ ಎಂದು ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಭರವಸೆ ನೀಡಿದೆ.

Category
ಕರಾವಳಿ ತರಂಗಿಣಿ