ನವದೆಹಲಿ: ಭಾರತವು ಭಯೋತ್ಪಾದನೆಯ ವಿರುದ್ಧ ಎಂದಿಗೂ ಮಣಿಯುವುದಿಲ್ಲ ಮತ್ತು ಅನಿವಾರ್ಯವಾದರೆ ಸುದೀರ್ಘ ಯುದ್ಧಕ್ಕೂ ಸಿದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ. ಎಎನ್‍ಐ ಹಮ್ಮಿಕೊಂಡಿದ್ದ 'ರಾಷ್ಟ್ರೀಯ ಭದ್ರತಾ ಶೃಂಗಸಭೆ 2.0'ರಲ್ಲಿ ಮಾತನಾಡಿದ ಅವರು, ಕಳೆದ ವರ್ಷ ನಡೆದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡರು. ಪಾಕಿಸ್ತಾನವನ್ನು ಅಂತರಾಷ್ಟ್ರೀಯ ಭಯೋತ್ಪಾದನೆಯ ಮೂಲ ಕೇಂದ್ರ ಎಂದು ಕರೆದ ಅವರು, ಭಯೋತ್ಪಾದನೆಯ ಸೈದ್ಧಾಂತಿಕ ಮತ್ತು ರಾಜಕೀಯ ಬೇರುಗಳನ್ನು ಸಂಪೂರ್ಣವಾಗಿ ಕಿತ್ತುಹಾಕುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಕಳೆದ ವರ್ಷ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ನಡೆಸಲಾದ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡುತ್ತಾ, "ಭಾರತವು ಹಳೆಯ ಮೃದು ಧೋರಣೆಯ ಚಿಂತನೆಯನ್ನು ಬಿಟ್ಟುಕೊಟ್ಟಿದೆ. ನಮ್ಮ ನೆಲದ ಮೇಲೆ ದಾಳಿಯಾದರೆ ನಾವು ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸಿದ್ದೇವೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ನಾವು ಸಾಮರ್ಥ್ಯದ ಕೊರತೆಯಿಂದ ನಿಲ್ಲಿಸಲಿಲ್ಲ, ಬದಲಾಗಿ ನಮ್ಮದೇ ಆದ ಕೆಲವು ಷರತ್ತುಗಳ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ನಿಲ್ಲಿಸಿದೆವು" ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತೀಯ ಸೇನೆಯು ತನ್ನ ಸಾಮರ್ಥ್ಯವನ್ನು ಗಣನೀಯವಾಗಿ ವಿಸ್ತರಿಸಿಕೊಂಡಿದೆ. ಯುದ್ಧದ ಸಮಯದಲ್ಲಿ ಅಗತ್ಯಬಿದ್ದರೆ ಶಸ್ತ್ರಾಸ್ತ್ರಗಳ ತ್ವರಿತ ಪೂರೈಕೆ ಮಾಡುವಷ್ಟು ನಮ್ಮ ಸೇನಾ ಉದ್ಯಮ ಸಜ್ಜಾಗಿದೆ. ಕಾರ್ಯಾಚರಣೆಯ ವೇಳೆ ಪಾಕಿಸ್ತಾನವು ನೀಡಿದ್ದ ಪರಮಾಣು ದಾಳಿಯ ಬೆದರಿಕೆಗಳಿಗೆ ಭಾರತ ಬಗ್ಗಲಿಲ್ಲ ಮತ್ತು ಆ ಮೋಸದ ಜಾಲಕ್ಕೆ ಬಲಿಯಾಗಲಿಲ್ಲ ಎಂದು ಸಚಿವರು ಹೆಮ್ಮೆಯಿಂದ ತಿಳಿಸಿದರು. ಇದೇ ವೇಳೆ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, "ಭಾರತ ಮತ್ತು ಪಾಕಿಸ್ತಾನ ಒಟ್ಟಿಗೆ ಸ್ವಾತಂತ್ರ್ಯ ಪಡೆದರೂ, ಇಂದು ಭಾರತ ಐಟಿ ಕ್ಷೇತ್ರದಲ್ಲಿ ಜಾಗತಿಕವಾಗಿ ಮಿಂಚುತ್ತಿದ್ದರೆ, ಪಾಕಿಸ್ತಾನ ಭಯೋತ್ಪಾದನೆಯ ಜಾಗತಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಭಯೋತ್ಪಾದನೆಗೆ ಅಲ್ಲಿನ ರಾಜಕೀಯ ಪೋಷಕತ್ವವೇ ಮುಖ್ಯ ಕಾರಣವಾಗಿದ್ದು, ಕಾರ್ಯಾಚರಣೆಗಿಂತ ಹೆಚ್ಚಾಗಿ ಅದರ ಸೈದ್ಧಾಂತಿಕ ಐಪಿ ಅಡ್ರೆಸ್ ಅನ್ನು ನಾಶಪಡಿಸಬೇಕಿದೆ" ಎಂದರು. ಯಾವುದೇ ಸಂದರ್ಭದಲ್ಲೂ ಭಯೋತ್ಪಾದಕ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂಬ ಖಡಕ್ ಸಂದೇಶವನ್ನು ರಕ್ಷಣಾ ಸಚಿವರು ಈ ಶೃಂಗಸಭೆಯ ಮೂಲಕ ನೆರೆಯ ರಾಷ್ಟ್ರಕ್ಕೆ ರವಾನಿಸಿದ್ದಾರೆ.