ಗಂಗಾಸಾಗರ : ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ 24 ಪರಗಣ ವಿಭಾಗದ ಜಯನಗರ, ಮಥುರಾಪುರ ಮತ್ತು ಡೈಮಂಡ್ ಹಾರ್ಬರ್ ಜಿಲ್ಲೆಗಳ ಚುನಾವಣಾ ಉಸ್ತುವಾರಿ ಹೊತ್ತಿರುವ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗಂಗಾ ಸಾಗರದಲ್ಲಿ ವಿಜಯದ ಸಂಕೇತವಾಗಿ ಶಂಖವನ್ನು ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.
ಹಿಮಾಲಯದ ಗಂಗೋತ್ರಿಯಲ್ಲಿ ಉಗಮಿಸುವ ಗಂಗಾ ನದಿಯು ಪಶ್ಚಿಮ ಬಂಗಾಳದ ಗಂಗಾ ಸಾಗರದಲ್ಲಿ ಸಮುದ್ರವನ್ನು ಸೇರುತ್ತದೆ. ಧಾರ್ಮಿಕವಾಗಿ ಅತ್ಯಂತ ಮಹತ್ವದ ಈ ಪುಣ್ಯಕ್ಷೇತ್ರದಲ್ಲಿ ಕಪಿಲ ಮುನಿಗಳ ಆಶ್ರಮವೂ ಇದೆ. ಇಂದು ಗೃಹ ಸಚಿವ ಅಮಿತ್ ಶಾ ಅವರು ಗಂಗಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಅರ್ಘ್ಯವನ್ನು ಅರ್ಪಿಸಿದರು. ಬಳಿಕ ಕಪಿಲಮುನಿ ಆಶ್ರಮಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರವಿ ಸಿ.ಟಿ ಅವರು, "ಬಂಗಾಳವನ್ನು ದುರಾಡಳಿತದ ಕಪಿಮುಷ್ಠಿಯಿಂದ ಬಿಡಿಸಲು ಜನರು ಸನ್ನದ್ಧರಾಗಿದ್ದಾರೆ. ಕೊಲೆ, ಸುಲಿಗೆ, ಅತ್ಯಾಚಾರ, ಭ್ರಷ್ಟಾಚಾರ ಮತ್ತು ನಿರುದ್ಯೋಗದಿಂದ ಬೇಸತ್ತಿರುವ ಬಂಗಾಳದ ಯುವಜನರು ಬದಲಾವಣೆ ಬಯಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿಶ್ವಾಸವಿಟ್ಟಿರುವ ಜನರು ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನಿಶ್ಚಿತ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ನಬೆಂದು ಸುಂದರ್ ನಸ್ಕರ್, ಸಾಗರ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುಮಂತ ಮಂಡಲ್ ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.