ಜಮ್ಮು ಮತ್ತು ಕಾಶ್ಮೀರ : ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಗಂಭೀರ ಆರೋಪದ ಮೇಲೆ ಮತ್ತೊಂದು ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ನಿಷೇಧಿಸಲಾಗಿದೆ. ದಕ್ಷಿಣ ಕಾಶ್ಮೀರದ ಸೇಬುಗಳ ಜಿಲ್ಲೆ ಎಂದು ಪ್ರಸಿದ್ಧವಾಗಿರುವ ಶೋಪಿಯಾನ್‌ನ ಇಮಾಮ್ ಸಾಹಿಬ್ ಪ್ರದೇಶದಲ್ಲಿರುವ 'ಜಾಮಿಯಾ ಸಿರಾಜುಲ್ ಉಲೂಮ್' ಎಂಬ ಸಂಸ್ಥೆಯ ಮೇಲೆ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.
ವಿಭಾಗೀಯ ಆಯುಕ್ತರು ಯುಎಪಿಎ ಸೆಕ್ಷನ್ 8(1) ರ ಅಡಿಯಲ್ಲಿ ಈ ಸಂಸ್ಥೆಯನ್ನು ಕಾನೂನುಬಾಹಿರ ಸಂಸ್ಥೆ ಎಂದು ಘೋಷಿಸಿ ಆದೇಶ ಹೊರಡಿಸಿದ್ದಾರೆ. ಶೋಪಿಯಾನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾರ್ಚ್ 24 ರಂದು ಸಲ್ಲಿಸಿದ್ದ ಸುದೀರ್ಘ ವರದಿಯಲ್ಲಿ, ಈ ಸಂಸ್ಥೆಯು ಭಾರತ ಸರ್ಕಾರದಿಂದ ನಿಷೇಧಿಸಲ್ಪಟ್ಟಿರುವ ಜಮಾತ್-ಎ-ಇಸ್ಲಾಮಿ (ಜೆಇ) ಸಂಘಟನೆಯೊಂದಿಗೆ ರಹಸ್ಯವಾಗಿ ನಿರಂತರ ಸಂಪರ್ಕ ಹೊಂದಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಈ ನಿಷೇಧಿತ ಸಂಘಟನೆಯ ಪ್ರಮುಖರು ಸಂಸ್ಥೆಯ ಆಡಳಿತ ಮಂಡಳಿ ಮತ್ತು ಬೋಧಕ ಸಿಬ್ಬಂದಿಗಳ ಮೇಲೆ ಪರೋಕ್ಷ ನಿಯಂತ್ರಣ ಸಾಧಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಲಭ್ಯವಿರುವ ದಾಖಲೆಗಳ ಪ್ರಕಾರ, ಸಂಸ್ಥೆಯು ಕೇವಲ ಧಾರ್ಮಿಕ ಶಿಕ್ಷಣಕ್ಕೆ ಸೀಮಿತವಾಗದೆ, ಉಗ್ರವಾದವನ್ನು ಉತ್ತೇಜಿಸುವ ಕೇಂದ್ರವಾಗಿ ಬದಲಾಗಿದೆ ಎಂದು ವರದಿ ಹೇಳಿದೆ. ಇಲ್ಲಿ ಓದಿದ ಹಲವಾರು ಮಾಜಿ ವಿದ್ಯಾರ್ಥಿಗಳು ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿ ರಾಷ್ಟ್ರೀಯ ಭದ್ರತೆಗೆ ಸಂಚಕಾರ ತಂದಿರುವುದು ದೃಢಪಟ್ಟಿದೆ. ಇದರೊಂದಿಗೆ ಸಂಸ್ಥೆಯು ಹಲವಾರು ಆರ್ಥಿಕ ಅಪರಾಧಗಳು ಮತ್ತು ಭೂ ಅಕ್ರಮಗಳಲ್ಲಿ ಭಾಗಿಯಾದ ಸಾಕ್ಷ್ಯಗಳೂ ದೊರೆತಿವೆ.
ಈ ನಡುವೆ ಸರ್ಕಾರದ ನಿರ್ಧಾರಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯುಎಪಿಎ ಅಡಿಯಲ್ಲಿ ಜಾಮಿಯಾ ಸಿರಾಜುಲ್ ಉಲೂಮ್ ಸಂಸ್ಥೆಯನ್ನು ನಿಷೇಧಿಸಿರುವುದು ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾಯವಾಗಿದೆ ಎಂದು ಅವರು ಟೀಕಿಸಿದ್ದಾರೆ. ಈ ಸಂಸ್ಥೆಯು ದುಬಾರಿ ಶಿಕ್ಷಣ ಪಡೆಯಲಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ವೈದ್ಯರು ಮತ್ತು ಇತರ ವೃತ್ತಿಪರರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಯಾವುದೇ ದೃಢವಾದ ಪುರಾವೆಗಳಿಲ್ಲದೆ ಇಂತಹ ಸಂಸ್ಥೆಗಳನ್ನು ನಿಷೇಧಿಸುವುದು ಪೂರ್ವಾಗ್ರಹ ಪೀಡಿತ ನಿರ್ಧಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.