image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ: ಅಬ್ಬರದ ಮತದಾನದ ನಡುವೆ 736 ಬಿಜೆಪಿ ಅಭ್ಯರ್ಥಿಗಳ ಅವಿರೋಧ ಆಯ್ಕೆ

ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ: ಅಬ್ಬರದ ಮತದಾನದ ನಡುವೆ 736 ಬಿಜೆಪಿ ಅಭ್ಯರ್ಥಿಗಳ ಅವಿರೋಧ ಆಯ್ಕೆ

ಗಾಂಧಿನಗರ : ಗುಜರಾತ್ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಣವು ಭಾರೀ ಕುತೂಹಲಕ್ಕೆ ಸಾಕ್ಷಿಯಾಗಿದ್ದು, ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯ ನಂತರ ರಾಜ್ಯದ 15 ನಗರಪಾಲಿಕೆಗಳು, 84 ನಗರಸಭೆಗಳು, 34 ಜಿಲ್ಲಾ ಪಂಚಾಯಿತಿ ಹಾಗೂ 260 ತಾಲೂಕು ಪಂಚಾಯಿತಿಗಳಿಗೆ ಭಾನುವಾರ ಶಾಂತಿಯುತ ಮತದಾನ ನಡೆಯಿತು. 1995ರಿಂದಲೂ ರಾಜ್ಯದಲ್ಲಿ ಸತತವಾಗಿ ಆಡಳಿತ ನಡೆಸುತ್ತಿರುವ ಬಿಜೆಪಿ ಈ ಬಾರಿಯೂ ತನ್ನ ಪ್ರಾಬಲ್ಯ ಮೆರೆದಿದ್ದು, ಅಧಿಕೃತ ಫಲಿತಾಂಶಕ್ಕೂ ಮುನ್ನವೇ ದಾಖಲೆಯ 736 ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಅವಿರೋಧ ಆಯ್ಕೆಯ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, 2015ರಲ್ಲಿ ಕೇವಲ 37 ಆಗಿದ್ದ ಈ ಸಂಖ್ಯೆ, 2021ರಲ್ಲಿ 220ಕ್ಕೆ ಏರಿತ್ತು, ಈ ಬಾರಿ ಅದು ಬೃಹತ್ ಮಟ್ಟಕ್ಕೆ ತಲುಪಿದೆ. ಆದರೆ, ವಿರೋಧ ಪಕ್ಷದ ಅಭ್ಯರ್ಥಿಗಳ ಮೇಲೆ ಒತ್ತಡ ಹೇರಿ ಅವರ ನಾಮಪತ್ರಗಳನ್ನು ಹಿಂಪಡೆಯುವಂತೆ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಎಪ್ರಿಲ್ 15ರಂದು ನಾಮಪತ್ರ ಸಲ್ಲಿಕೆಯಾದ ಕೆಲವೇ ಕ್ಷಣಗಳಲ್ಲಿ ವಡೋದರ, ಸೂರತ್, ಮೆಹ್ಸಾನ ಹಾಗೂ ಬನಸ್ಕಾಂತದಾದ್ಯಂತ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಸುಮಾರು 400ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದೆ ಸರಿದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

​ಭಾನುವಾರ ಮುಂಜಾನೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಯು ಸಂಜೆ 6 ಗಂಟೆಯವರೆಗೆ ಸಾಗಿದ್ದು, ರಾಜ್ಯದಾದ್ಯಂತ ಒಟ್ಟು 4.18 ಕೋಟಿ ಅರ್ಹ ಮತದಾರರು 25,537 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಹಕ್ಕು ಚಲಾಯಿಸಿದರು. ವಿಶೇಷವೆಂದರೆ, ಈ ಬಾರಿ ನೂತನವಾಗಿ ರಚಿಸಲಾದ ನದಿಯಾಡ್, ಸುರೇಂದ್ರನಗರ್, ಆನಂದ್, ನವ್ ಸಾರಿ, ವಾಪಿ, ಮೊರ್ಬಿ, ಗಾಂಧಿಧಾಮ್, ಪೋರಬಂದರ್ ಹಾಗೂ ಮೆಹ್ಸಾನ ಸೇರಿದಂತೆ ಒಟ್ಟು ಒಂಬತ್ತು ನಗರ ಪಾಲಿಕೆಗಳಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದೆ. ರಾಜ್ಯದಾದ್ಯಂತ ಬಿಗಿ ಭದ್ರತೆಯ ನಡುವೆ ನಡೆದ ಈ ಚುನಾವಣೆಯ ಮತ ಎಣಿಕೆಯು ಎಪ್ರಿಲ್ 28ರಂದು ನಡೆಯಲಿದ್ದು, ಅಂದು ಅಧಿಕೃತವಾಗಿ ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ಸ್ಪಷ್ಟವಾಗಲಿದೆ.

Category
ಕರಾವಳಿ ತರಂಗಿಣಿ