ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ (ಆಪ್) ಭಾರಿ ಆಘಾತ ನೀಡುವಂತಹ ಬೆಳವಣಿಗೆಯೊಂದರಲ್ಲಿ, ಪಕ್ಷದ ಪ್ರಭಾವಿ ನಾಯಕ ಹಾಗೂ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಇಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮೊಂದಿಗೆ ಇತರ ಏಳು ರಾಜ್ಯಸಭಾ ಸಂಸದರು ಕೂಡ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಲಿದ್ದಾರೆ ಎಂದು ಅವರು ಘೋಷಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ ಚಡ್ಡಾ, ಆಮ್ ಆದ್ಮಿ ಪಕ್ಷವು ತನ್ನ ಮೂಲ ತತ್ವಗಳು ಮತ್ತು ಸಿದ್ಧಾಂತಗಳಿಂದ ದೂರ ಸರಿದಿದೆ ಎಂದು ಆರೋಪಿಸಿದರು. "ನಾನು 15 ವರ್ಷಗಳ ಕಾಲ ರಕ್ತ ಮತ್ತು ಬೆವರು ಸುರಿಸಿ ಕಟ್ಟಿದ ಪಕ್ಷ ಇಂದು ತನ್ನ ಹಾದಿ ತಪ್ಪಿದೆ. ಕಳೆದ ಕೆಲವು ಸಮಯದಿಂದ ನಾನು ತಪ್ಪು ಪಕ್ಷದಲ್ಲಿದ್ದೇನೆ ಎಂಬ ಭಾವನೆ ನನ್ನಲ್ಲಿ ಮೂಡುತ್ತಿತ್ತು. ಆದ್ದರಿಂದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ನಾನು ಪಕ್ಷವನ್ನು ತೊರೆಯುತ್ತಿದ್ದೇನೆ" ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯಸಭೆಯಲ್ಲಿ ಆಪ್ ಹೊಂದಿರುವ ಒಟ್ಟು 10 ಸಂಸದರಲ್ಲಿ 2/3 ಭಾಗದಷ್ಟು ಅಂದರೆ 7 ಸಂಸದರು ಒಟ್ಟಾಗಿ ಬಿಜೆಪಿಗೆ ಸೇರುತ್ತಿರುವುದರಿಂದ, ಸಂವಿಧಾನದ ವಿಲೀನ ಪ್ರಕ್ರಿಯೆಯ ನಿಯಮದಂತೆ ಈ ಬದಲಾವಣೆ ನಡೆಯಲಿದೆ. ರಾಘವ್ ಚಡ್ಡಾ ಅವರೊಂದಿಗೆ ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ಹರ್ಭಜನ್ ಸಿಂಗ್, ಸ್ವಾತಿ ಮಲಿವಾಲ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್ ಸಾಹ್ನಿ ಅವರು ಬಿಜೆಪಿ ಸೇರುತ್ತಿರುವ ಪ್ರಮುಖ ಸಂಸದರಾಗಿದ್ದಾರೆ.
ಈಗಾಗಲೇ ಈ ಸಂಬಂಧಿಸಿದ ಸಹಿ ಮಾಡಿದ ಪತ್ರಗಳನ್ನು ಮತ್ತು ದಾಖಲೆಗಳನ್ನು ರಾಜ್ಯಸಭಾ ಅಧ್ಯಕ್ಷರಿಗೆ ಸಲ್ಲಿಸಲಾಗಿದೆ ಎಂದು ಚಡ್ಡಾ ಮಾಹಿತಿ ನೀಡಿದರು. ಮುಂಬರುವ ದಿನಗಳಲ್ಲಿ ಈ ಬೆಳವಣಿಗೆಯು ದೆಹಲಿ ಮತ್ತು ಪಂಜಾಬ್ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗುವ ಸಾಧ್ಯತೆಯಿದೆ.