image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಮತಾ ಬ್ಯಾನರ್ಜಿಗೆ ಚುನಾವಣಾ ಸಲಹಾಗಾರ ಸಂಸ್ಥೆ ಐ-ಪ್ಯಾಕ್, ತಾತ್ಕಾಲಿಕವಾಗಿ ಬಂದ್!

ಮಮತಾ ಬ್ಯಾನರ್ಜಿಗೆ ಚುನಾವಣಾ ಸಲಹಾಗಾರ ಸಂಸ್ಥೆ ಐ-ಪ್ಯಾಕ್, ತಾತ್ಕಾಲಿಕವಾಗಿ ಬಂದ್!

ಕೋಲ್ಕತ್ತ : ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ, ಇಡಿ (ಜಾರಿ ನಿರ್ದೇಶನಾಲಯ), ಆಡಳಿತಾರೂಢ ತೃಣಮೂಲ ಕಾಂಗ್ರೆಸ್'ಗೆ (AITMC) ದೊಡ್ಡ ಹೊಡೆತವನ್ನು ನೀಡಿದೆ. ಮಮತಾ ಬ್ಯಾನರ್ಜಿಗೆ ಚುನಾವಣಾ ಸಲಹಾಗಾರ ಸಂಸ್ಥೆಯಾಗಿದ್ದ ಐ-ಪ್ಯಾಕ್ (I-Pac), ತಾತ್ಕಾಲಿಕವಾಗಿ ತನ್ನ ಕಚೇರಿಯನ್ನು ಬಂದ್ ಮಾಡಲು ನಿರ್ಧರಿಸಿದೆ. ಕಚೇರಿಯನ್ನು ಸ್ಥಗಿತಗೊಳಿಸುವ ಸುದ್ದಿಯನ್ನು ಸಿಎಂ ಮಮತಾ ಬ್ಯಾನರ್ಜಿ ನಿರಾಕರಿಸಿದ್ದರೂ, ಬಂಗಾಳದ ತಮ್ಮ ಕಚೇರಿಯ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ರಜೆಯ ಮೇಲೆ ತೆರಳಲು, ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು, ಇಮೇಲ್ ಕಳುಹಿಸಿದ್ದಾರೆಂದು ವರದಿಯಾಗಿದೆ. ವಿಧಾನಸಭಾ ಚುನಾವಣೆಯ ವೇಳೆ, ಟಿಎಂಸಿಗೆ ಆದ ದೊಡ್ಡ ಹಿನ್ನಡೆ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಪಶ್ಚಿಮ ಬಂಗಾಳದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೊದಲ ಹಂತದ ಚುನಾವಣೆ ಇದೇ ಬರುವ ಗುರುವಾರ (ಏಪ್ರಿಲ್ 23) ಮತ್ತು ಎರಡನೇ ಹಂತದ ಚುನಾವಣೆ ಏಪ್ರಿಲ್ 29ರಂದು ನಡೆಯಲಿದ್ದು, ಮೇ 4ಕ್ಕೆ ಫಲಿತಾಂಶ ಹೊರಬೀಳಲಿದೆ. ಈ ಹಿನ್ನಲೆಯಲ್ಲಿ, ಟಿಎಂಸಿಯ ಪೊಲಿಟಿಕಲ್ ಕನ್ಸಲ್ಟಂಟ್ ಸಂಸ್ಥೆ, ಐ-ಪ್ಯಾಕ್ ಸ್ಥಗಿತಗೊಂಡಿರುವುದು, ಆಡಳಿತ ಪಕ್ಷಕ್ಕೆ ಆದ ದೊಡ್ಡ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಟಿಎಂಸಿಯ ಮಾಸ್ಟರ್ ಮೈಂಡ್ ಎಂದೇ ಐಪ್ಯಾಕ್ ಸಂಸ್ಥೆಯನ್ನು ಕರೆಯಲಾಗುತ್ತಿದೆ.

ಇಡಿಯು ಐ-ಪ್ಯಾಕ್ ಸಂಸ್ಥೆಯ ಸಹ ಸಂಸ್ಥಾಪಕರಾದ ರಿಷಿರಾಜ್ ಸಿಂಗ್ ಅವರ ನಿವಾಸದ ಮೇಲೂ ದಾಳಿಯನ್ನು ನಡೆಸಿತ್ತು. ಇದರ ಬೆನ್ನಲ್ಲೇ, ಇನ್ನೋರ್ವ ಸಂಸ್ಥೆಯ ಆಯಕಟ್ಟಿನ ಅಧಿಕಾರಿ ವಿನೇಶ್ ಚಂದೇಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದರು. ಬಂಗಾಳದಲ್ಲಿ ತನ್ನ ಸಂಸ್ಥೆಯ ಕಚೇರಿಯ ಸಿಬ್ಬಂದಿಗಳಿಗೆ ಇಪ್ಪತ್ತು ದಿನಗಳ ರಜೆಯ ಮೇಲೆ ಹೋಗುವಂತೆ, ಮಾನವ ಸಂಪನ್ಮೂಲ (HR) ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ. ಮೇ ಹನ್ನೊಂದರ ನಂತರ, ಕಚೇರಿ ತೆರೆಯುವುದರ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು ಎಂದು ಸಂಸ್ಥೆ ಹೇಳಿದೆ. ಕಳೆದ ಜನವರಿ ತಿಂಗಳಲ್ಲಿ ಐ-ಪ್ಯಾಕ್ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಕೋಲ್ಕತ್ತ ನಿವಾಸದ ಮೇಲೆ ಇಡಿ ದಾಳಿ ನಡೆದಿತ್ತು. ಆವೇಳೆ, ಮಮತಾ ಬ್ಯಾನರ್ಜಿ ಖುದ್ದು ಅಲ್ಲಿಗೆ ತೆರಳಿ, ದಾಳಿಯ ವಿರುದ್ದ ಆಕ್ರೋಶವನ್ನು ಹೊರಹಾಕಿದ್ದರು. ದಾಳಿ ನಡೆಯುತ್ತಿದ್ದಾಗಲೇ, ಅಲ್ಲಿಂದ ಕೆಲವೊಂದು ಫೈಲ್, ಫೋಲ್ಡರ್ ಮತ್ತು ಲ್ಯಾಪ್'ಟಾಪ್ ಅನ್ನು ಹೊರತಂದಿದ್ದರು. ಅದರಲ್ಲಿ, ಪಾರ್ಟಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ಇವೆ ಎಂದು ಅವರು ಹೇಳಿದ್ದರು.

Category
ಕರಾವಳಿ ತರಂಗಿಣಿ