ಥಾಣೆ: ನಾಸಿಕ್‌ನ ಪ್ರಸಿದ್ಧ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ನಲ್ಲಿ ಯುವತಿಯರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಅವರ ಪತಿ ಮೊಯಿನ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಾಸಿಕ್‌ನ ಟಿಸಿಎಸ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದಲ್ಲಿ (HR) ಕಾರ್ಯನಿರ್ವಹಿಸುತ್ತಿದ್ದ ನಿದಾ ಖಾನ್, ಅಲ್ಲಿನ ಮಹಿಳಾ ಉದ್ಯೋಗಿಗಳಿಗೆ ಕಿರುಕುಳ ಮತ್ತು ದೌರ್ಜನ್ಯ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಕುರಿತು ನಾಸಿಕ್‌ನ ಡಿಯೋಲಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿದೆ.
ಆರೋಪಿ ನಿದಾ ಖಾನ್ ಅವರ ಪತಿ ಮೊಯಿನ್ ನವಿದ್ ಇಕ್ಬಾಲ್ ಖಾನ್ (27) ಮುಂಬ್ರಾದ ಅಮೆಜಾನ್ ವೆಬ್ ಸರ್ವೀಸಸ್ (AWS) ನಲ್ಲಿ ಲಾಜಿಸ್ಟಿಕ್ಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ತನಿಖೆಯ ಭಾಗವಾಗಿ ಎಸ್‌ಐಟಿ ತಂಡವು ಮುಂಬ್ರಾದಲ್ಲಿರುವ ಮೊಯಿನ್ ಅವರ ಕಚೇರಿಗೆ ತೆರಳಿ ಅವರನ್ನು ವಶಕ್ಕೆ ಪಡೆದಿದೆ. ನಿದಾ ಖಾನ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆಕೆಯ ಪತ್ತೆಗಾಗಿ ಮತ್ತು ಈ ಕೃತ್ಯದಲ್ಲಿ ಅವರ ಪಾತ್ರವೇನಾದರೂ ಇದೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ವರದಿಗಳ ಪ್ರಕಾರ, 26 ವರ್ಷದ ನಿದಾ ಖಾನ್ ವಿರುದ್ಧ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಏಪ್ರಿಲ್ 9 ರಂದು ಟಿಸಿಎಸ್ ಸಂಸ್ಥೆಯು ಆಕೆಯನ್ನು ಕೆಲಸದಿಂದ ವಜಾಗೊಳಿಸಿತ್ತು. ನಿದಾ ಈ ಹಿಂದೆ ಮುಂಬೈನಲ್ಲಿ ಪತಿಯೊಂದಿಗೆ ವಾಸವಿದ್ದು, ಅಲ್ಲಿನ ಮಲಾಡ್ ಮತ್ತು ಹಿರಾನಂದಾನಿ ಕಚೇರಿಗಳಲ್ಲಿ ಹೆಚ್‌ಆರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಕಳೆದುಕೊಂಡ ನಂತರ ಆಕೆ ನಾಸಿಕ್‌ಗೆ ಮರಳಿದ್ದಳು ಎಂದು ಹೇಳಲಾಗುತ್ತಿದೆಯಾದರೂ, ಸದ್ಯ ಆಕೆ ತಲೆಮರೆಸಿಕೊಂಡಿದ್ದಾರೆ. ಕೇವಲ ಉದ್ಯೋಗ ಕಡಿತದ ವಿಚಾರವಾಗಿ ಪ್ರಾರಂಭವಾದ ಈ ಘಟನೆಯು ಈಗ ದೊಡ್ಡ ಮಟ್ಟದ ಕ್ರಿಮಿನಲ್ ಆಯಾಮ ಪಡೆದುಕೊಂಡಿದೆ. ನಿದಾ ಖಾನ್ ಪತಿಯ ಬಂಧನದಿಂದಾಗಿ ಈ ಜಾಲದಲ್ಲಿ ಇನ್ನೂ ಯಾರೆಲ್ಲಾ ಭಾಗಿಯಾಗಿದ್ದಾರೆ ಮತ್ತು ಮಹಿಳಾ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ಕಿರುಕುಳದ ಹಿಂದಿನ ನಿಗೂಢತೆ ಏನು ಎಂಬುದು ಶೀಘ್ರದಲ್ಲೇ ಬಯಲಾಗುವ ಸಾಧ್ಯತೆಯಿದೆ. ಸದ್ಯ ಪೊಲೀಸರು ಮೊಯಿನ್ ಖಾನ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ನಾಸಿಕ್‌ಗೆ ಕರೆದೊಯ್ದಿದ್ದು, ತನಿಖೆ ಮುಂದುವರಿದಿದೆ.