ನವದೆಹಲಿ : ಮಹಾತ್ಮ ಜ್ಯೋತಿಬಾ ಫುಲೆ ಅವರ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಆತ್ಮೀಯವಾಗಿ ಮಾತನಾಡಿಕೊಂಡರು. ರಾಜಕೀಯ ವೈರಿಗಳ ಈ ಅಪರೂಪದ ಕ್ಷಣವನ್ನು ನೆಟ್ಟಿಗರು ಪ್ರಜಾಪ್ರಭುತ್ವದ ಸೌಂದರ್ಯ ಎಂದು ಶ್ಲಾಘಿಸಿದರು. ಸದಾ ರಾಜಕೀಯ ಜಿದ್ದಾಜಿದ್ದಿಯಲ್ಲಿ ತೊಡಗಿರುವ ಈ ಇಬ್ಬರು ನಾಯಕರು, ಮಹಾನ್ ಸುಧಾರಕನಿಗೆ ಹೂಗುಚ್ಛ ಅರ್ಪಿಸುವ ವೇಳೆ ಅತ್ಯಂತ ಆತ್ಮೀಯವಾಗಿ ಮತ್ತು ಮುಕ್ತವಾಗಿ ಮಾತನಾಡಿಕೊಂಡ ಕ್ಷಣ ಎಲ್ಲರ ಗಮನ ಸೆಳೆಯಿತು. ವಿವಿಧ ಪಕ್ಷಗಳ ನಾಯಕರು ಒಗ್ಗೂಡಿ ಫುಲೆ ಅವರಿಗೆ ನಮನ ಸಲ್ಲಿಸಿದರು. ಸದಾಕಾಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ರಾಹುಲ್ ಗಾಂಧಿಗೆ, ಮೋದಿ ಕೂಡ ಸಾರ್ವಜನಿಕ ವೇದಿಕೆಯಲ್ಲಿ ಸಿಗುವ ಅವಕಾಶದಲ್ಲಿ ತಿರುಗೇಟು ನೀಡುತ್ತಿದ್ದರು. ಇವರಿಬ್ಬರು ಆತ್ಮೀಯವಾಗಿ ಮಾತನಾಡುವ ವಿಡಿಯೋ ಸಿಕ್ಕಿದ್ದು ಬಹಳ ಕಡಿಮೆ. ತೀರಾ ಅಪರೂಪ ಎನ್ನುವಂತೆ ಶನಿವಾರ ಈ ಕ್ಷಣ ಸಿಕ್ಕಿದ್ದು, ಇದು ದೇಶದ ಪ್ರಜಾಪ್ರಭುತ್ವದ ಸೌಂದರ್ಯ ಎಂದು ನೆಟ್ಟಿಗರು ಮೆಚ್ಚಿದ್ದಾರೆ.
ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜನ್ಮದಿನಾಚರಣೆಯ ವರ್ಷಾಚರಣೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ, "ಜ್ಯೋತಿಬಾ ಫುಲೆ ಅವರು ಸಮಾನತೆ, ನ್ಯಾಯ ಮತ್ತು ಶಿಕ್ಷಣದ ಆದರ್ಶಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದೂರದೃಷ್ಟಿಯ ಸಮಾಜ ಸುಧಾರಕ" ಎಂದು ಬಣ್ಣಿಸಿದ್ದಾರೆ. ಮಹಿಳೆಯರ ಮತ್ತು ತುಳಿತಕ್ಕೊಳಗಾದವರ ಹಕ್ಕುಗಳಿಗಾಗಿ ಹೋರಾಡಿದ ಅವರ ಆಲೋಚನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಎಕ್ಸ್ (X) ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫುಲೆ ಅವರನ್ನು 'ಶಿಕ್ಷಣ ತಜ್ಞ' ಎಂದು ಕರೆದಿದ್ದು, 'ಸತ್ಯಶೋಧಕ ಸಮಾಜ'ದ ಮೂಲಕ ಅವರು ಸಮಾಜದಲ್ಲಿ ಸಮಾನತೆ ತರಲು ಮಾಡಿದ ಕೆಲಸ ಅಪಾರ ಎಂದು ಶ್ಲಾಘಿಸಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು "ಫುಲೆ ಅವರು ಭಾರತದ ಶೈಕ್ಷಣಿಕ ಕ್ರಾಂತಿಯ ಪಿತಾಮಹ ಮತ್ತು ದಲಿತರ ಏಳಿಗೆಗಾಗಿ ಹೋರಾಡಿದ ಬೌದ್ಧಿಕ ಕ್ರಾಂತಿಕಾರಿ ಸೂರ್ಯ" ಎಂದು ಗೌರವ ಸಲ್ಲಿಸಿದ್ದಾರೆ.