ನವದೆಹಲಿ : ಪಾಕಿಸ್ತಾನದ ಗುಪ್ತಚರ ಸಂಸ್ಥೆ ಭಾರತದ 4 ರಾಜ್ಯಗಳ ಹಲವು ನಗರಗಳ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟೀವಿ ಅಳವಡಿಸಿ ಭಾರತೀಯ ಸೇನೆಯ ಚಲನವಲನಗಳನ್ನು ನೇರವಾಗಿ ವೀಕ್ಷಣೆ ಮಾಡುತ್ತಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಉಗ್ರ ಸಂಘಟನೆಯ ಸ್ಥಳೀಯ ಕಾರ್ಯಕರ್ತರನ್ನು ಬಳಸಿಕೊಂಡು ಐಎಸ್‌ಐ ನಡೆಸುತ್ತಿದ್ದ ಅಂತಾರಾಜ್ಯ ಭಯೋತ್ಪಾದನಾ, ಶಸ್ತ್ರಾಸ್ತ್ರ ಹಾಗೂ ಬೇಹುಗಾರಿಕಾ ಜಾಲವೊಂದನ್ನು ದೆಹಲಿ ಪೊಲೀಸರ ವಿಶೇಷ ಪಡೆ ಭೇದಿಸಿದ್ದು, ಈ ಸಂಬಂಧ 11 ಮಂದಿಯನ್ನು ಬಂಧಿಸಿದೆ. ಈ ವೇಳೆ ಸಿಸಿಟೀವಿ ಮೂಲಕ ಬೇಹುಗಾರಿಕೆಯ ಸ್ಫೋಟಕ ವಿಷಯ ಪತ್ತೆಯಾಗಿದೆ. ಆರೋಪಿಗಳು ಪಂಜಾಬ್, ರಾಜಸ್ಥಾನ, ಹರ್ಯಾಣ, ಕಾಶ್ಮೀರದ ಗಡಿಯಲ್ಲಿನ ಸೂಕ್ಷ್ಮ ಮಿಲಿಟರಿ ನೆಲೆಗಳ ಸಮೀಪ ಸೋಲಾರ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ರಹಸ್ಯವಾಗಿ ಅಳವಡಿಸುವ ಮೂಲಕ ಪಾಕಿಸ್ತಾನಕ್ಕೆ ರಿಯಲ್ ಟೈಮ್‌ನಲ್ಲಿ ಸೇನಾ ಪಡೆಗಳ ಓಡಾಟದ ಮಾಹಿತಿ ರವಾನಿಸುತ್ತಿದ್ದರು. ಈ ಬಂಧನದಿಂದ ಸಂಭಾವ್ಯ ಭಯೋತ್ಪಾದನಾ ದಾಳಿಯನ್ನು ತಪ್ಪಿಸಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಶೇಷ ಪಡೆ ಮೊದಲು ಪಂಜಾಬ್ ಮತ್ತು ದೆಹಲಿಯಲ್ಲಿ ಆರು ಮಂದಿಯನ್ನು ಬಂಧಿಸಿದ್ದು, ಸಿಸಿಟೀವಿ ಕ್ಯಾಮೆರಾ, ನಾಲ್ಕು ಪಿಸ್ತೂಲ್‌ಗಳು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದೆ. ಎರಡನೇ ಕಾರ್ಯಾಚರಣೆಯನ್ನು ಮಿಲಿಟರಿ ಗುಪ್ತಚರ ಮಾಹಿತಿ ಆಧಾರದ ಮೇಲೆ ನಡೆಸಲಾಗಿದ್ದು, ಅದರಂತೆ ಪಂಜಾಬ್‌ನಲ್ಲಿ ಮತ್ತೆ ಐದು ಮಂದಿಯನ್ನು ಬಂಧಿಸಲಾಗಿದೆ.
ಈ ಉಗ್ರರ ಜಾಲವು ಬೇಹುಗಾರಿಕೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ದೇಶದ ಸೂಕ್ಷ್ಮ ರಕ್ಷಣಾ ನೆಲಗಳ ಮೇಲೆ ಕಣ್ಗಾವಲು ಇಡುವ ಕಾರ್ಯದಲ್ಲಿ ನಿರತವಾಗಿತ್ತು. ದೇಶದ ಗಡಿ ಪ್ರದೇಶ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಸೇನಾಪಡೆಗಳು ಓಡಾಡುವ ಪ್ರಮುಖ ಸ್ಥಳಗಳು, ಪ್ರಮುಖ ಸ್ಥಳಗಳಲ್ಲಿ ಕನಿಷ್ಠ 9 ಮೊಬೈಲ್ ಸಿಮ್ ಇರುವ ಸೋಲಾರ್ ಸಿಸಿಕ್ಯಾಮೆರಾ ಅಳವಡಿಸಿತ್ತು. ರಾತ್ರಿ ಹೊತ್ತಲ್ಲೂ ಮತ್ತು ವಿದ್ಯುತ್ ಲಭ್ಯವಿಲ್ಲದಾಗಲೂ ಸಿಸಿಟೀವಿ ದೃಶ್ಯಗಳು ಲಭ್ಯವಾಗಲಿ ಎನ್ನುವ ಕಾರಣಕ್ಕೆ ಸೌರಶಕ್ತಿ ಆಧರಿತ ಸಿಸಿಟೀವಿ ಕ್ಯಾಮೆರಾಗಳನ್ನು ಬಳಸಲಾಗಿತ್ತು ಎಂಬ ಮಾಹಿತಿಯೂ ತನಿಖೆ ವೇಳೆ ಹೊರಕ್ಕೆ ಬಂದಿದೆ. ಪಂಜಾಬ್‌ನ ಕಪೂರ್ಥಲಾ, ಜಲಂದರ್, ಪಠಾಣ್‌ಕೋಟ್, ಪಟಿಯಾಲ ಮತ್ತು ಮೊಗಾ, ಹರ್ಯಾಣದ ಅಂಬಾಲಾ, ಜಮ್ಮು ಮತ್ತು ಕಾಶ್ಮೀರದ ಕಥುವಾ, ರಾಜಸ್ಥಾನದ ಬಿಕಾನೆರ್ ಮತ್ತು ಅಲ್ವಾರ್‌ನಲ್ಲಿ ಈ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಸಿಸಿಟೀವಿ ಸೆರೆಹಿಡಿದ ಮಾಹಿತಿ ನೇರವಾಗಿ ಪಾಕ್‌ನಲ್ಲಿರುವ ನಿಯಂತ್ರಕರಿಗೆ ಮೊಬೈಲ್ ಆಯಪ್ ಮೂಲಕ ಲೈವ್ ಆಗಿ ರವಾನೆಯಾಗುತ್ತಿತ್ತು. ಬಂಧಿತರಲ್ಲಿ ಪ್ರಮುಖ ಆರೋಪಿಯಾದ ಪಂಜಾಬ್‌ನ ಮನ್‌ಪ್ರೀತ್ ಸಿಂಗ್ ಪಾಕ್‌ನಲ್ಲಿ ನೆಲೆಸಿರುವವರ ಉಗ್ರರ ಜತೆ ನೇರ ಸಂಪರ್ಕದಲ್ಲಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಲ್ಲಿ ಬಹುತೇಕರು ಹಣದ ಆಸೆಗಾಗಿ ಈ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.