ಲಖನೌ : ಒಂದು ಕಾಲದಲ್ಲಿ ಅಕ್ರಮ ಬಂದೂಕುಗಳ ತಯಾರಿಕೆ ಮತ್ತು ಬಳಕೆಗೆ ಕುಖ್ಯಾತಿ ಪಡೆದಿದ್ದ ಉತ್ತರ ಪ್ರದೇಶವು ಈಗ ರಕ್ಷಣಾ ಕಾರಿಡಾರ್‌ನ ಭಾಗವಾಗಿ ರಕ್ಷಣಾ ಉತ್ಪಾದನೆ ಮತ್ತು ಸ್ಟಾರ್ಟ್‌ಅಪ್‌ಗಳ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ರಕ್ಷಣಾ ಕಾರಿಡಾರ್‌ನ ಪ್ರಮುಖ ಭಾಗವಾದ ರಾಜ್ಯ ರಾಜಧಾನಿ ಲಖನೌನಲ್ಲಿ ಈ ಪರಿವರ್ತನೆ ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ಹೇಳಿವೆ.
ಲಖನೌ, ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕವನ್ನು ಹೊಂದಿರುವುದರ ಜೊತೆಗೆ, ಸುಧಾರಿತ ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಖಾಸಗಿ ಸ್ಟಾರ್ಟ್‌ಅಪ್‌ಗಳ ತಾಣವಾಗಿ ಮಾರ್ಪಟ್ಟಿದೆ. ಡ್ರೋನ್ ಲೋಕದಲ್ಲಿ ರಷ್ಯಾ-ಅಮೆರಿಕಾಗೆ ಸಡ್ಡು ಹೊಡೆಯಲು ನಿರ್ಧರಿಸಿರುವ ಭಾರತ, ಇದೀಗ AI ಆಧಾರಿತ, ಕಡಿಮೆ ವೆಚ್ಚದ ಡ್ರೋನ್ ಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಪವನ್, ರವೀಂದ್ರ ಪಾಲ್ ಸಿಂಗ್ ಮತ್ತು ಸೌರಭ್ ಸಿಂಗ್ ಸ್ಥಾಪಿಸಿದ ಹೋವೆರಿಟ್ ಎಂಬ ಕಂಪನಿಯು 'ದಿವ್ಯಾಸ್ತ್ರ ಎಂಕೆ -1' ಎಂಬ ಹೆಸರಿನ ಸುಧಾರಿತ ಮಾನವರಹಿತ ವೈಮಾನಿಕ ವಾಹನ(ಯುಎವಿ, ಡ್ರೋನ್) ಅಭಿವೃದ್ಧಿಪಡಿಸಿದೆ.
ಉದ್ಯಮಿಗಳ ಪ್ರಕಾರ, ಈ ಡ್ರೋನ್ ಅನ್ನು ಆಧುನಿಕ ಯುದ್ಧದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇದು ಕಣ್ಗಾವಲು ಮತ್ತು ನಿಖರವಾದ ದಾಳಿ ಎರಡನ್ನೂ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಮೂಲಗಳ ಪ್ರಕಾರ, ಹೊಸದಾಗಿ ವಿನ್ಯಾಸಗೊಳಿಸಲಾದ ಡ್ರೋನ್‌ನ ಪ್ರಮುಖ ಮುಖ್ಯಾಂಶಗಳಲ್ಲಿ ಒಂದು ಅದರ ಪ್ರಭಾವಶಾಲಿ 500-ಕಿಲೋಮೀಟರ್ ವ್ಯಾಪ್ತಿ ಮತ್ತು ಅಂದಾಜು 5-ಗಂಟೆಗಳ ಹಾರಾಟದ ಸಾಮಾರ್ಥ್ಯ ಮತ್ತು AI- ಆಧಾರಿತ ಗುರಿ ವ್ಯವಸ್ಥೆಯನ್ನು ಹೊಂದಿದೆ. ಇದು 10,000 ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸಬಲ್ಲದು ಮತ್ತು ಸುಮಾರು 15 ಕಿಲೋಗ್ರಾಂಗಳಷ್ಟು ಪೇಲೋಡ್ ಅನ್ನು ಹೊತ್ತೊಯ್ಯಬಲ್ಲದು. ಇದರಿಂದಾಗಿ ಹೆಚ್ಚಿನ ನಿಖರತೆಯೊಂದಿಗೆ ಗುರಿಗಳನ್ನು ಹೊಡೆಯಲು ಸಾಧ್ಯವಾಗುತ್ತದೆ.