image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸಾರ್ವಜನಿಕ ಉದ್ಯೋಗದ ನೇಮಕಾತಿಯಲ್ಲಿ ಕರುಣೆ ಮತ್ತು ವಿವೇಚನೆಗೆ ಸೀಮಿತ ಸ್ಥಾನ : ಸುಪ್ರೀಂ ಕೋರ್ಟ್

ಸಾರ್ವಜನಿಕ ಉದ್ಯೋಗದ ನೇಮಕಾತಿಯಲ್ಲಿ ಕರುಣೆ ಮತ್ತು ವಿವೇಚನೆಗೆ ಸೀಮಿತ ಸ್ಥಾನ : ಸುಪ್ರೀಂ ಕೋರ್ಟ್

ನವದೆಹಲಿ : ಸಾರ್ವಜನಿಕ ಉದ್ಯೋಗದ ನೇಮಕಾತಿಯಲ್ಲಿ ಕರುಣೆ ಮತ್ತು ವಿವೇಚನೆಗೆ ಸೀಮಿತ ಸ್ಥಾನವಿದ್ದು, ನಿಗದಿತ ದೈಹಿಕ ಪರೀಕ್ಷೆಗೆ ಹಾಜರಾಗದ ಅಭ್ಯರ್ಥಿಗೆ ಎರಡನೇ ಅವಕಾಶ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. "ಅವಕಾಶಗಳು ವಿರಳವಾಗಿದ್ದಾಗ, ಅವುಗಳನ್ನು ಎರಡೂ ಕೈಗಳಿಂದ ಬಾಚಿಕೊಳ್ಳಬೇಕು" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ದಿಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪ್ರಕ್ರಿಯೆಯಡಿ ನಡೆಯುವ ದೈಹಿಕ ಪರೀಕ್ಷೆ (PE&MT)ಗೆ ಹಾಜರಾಗದ ಅಭ್ಯರ್ಥಿಗೆ ಮತ್ತೊಂದು ಅವಕಾಶ ನೀಡುವಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ದಿಲ್ಲಿ ಹೈಕೋರ್ಟ್ ಎತ್ತಿಹಿಡಿದಿತ್ತು. ಈ ತೀರ್ಪುಗಳನ್ನು ಪ್ರಶ್ನಿಸಿ ದಿಲ್ಲಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿ, ಹೈಕೋರ್ಟ್ ಮತ್ತು ನ್ಯಾಯಮಂಡಳಿಯ ಆದೇಶಗಳನ್ನು ರದ್ದುಗೊಳಿಸಿದೆ. ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು, ಲಕ್ಷಾಂತರ ಅಭ್ಯರ್ಥಿಗಳು ಸ್ಪರ್ಧಿಸುವ ಸಾರ್ವಜನಿಕ ಉದ್ಯೋಗಗಳಲ್ಲಿ ಒಮ್ಮೆ ನೀಡಲಾದ ಅವಕಾಶವನ್ನು ತಪ್ಪಿಸಿದವರಿಗೆ ಮರು ಅವಕಾಶ ನೀಡುವುದು ಸಮಾನತೆಯ ತತ್ವಕ್ಕೆ ವಿರುದ್ಧ ಎಂದು ಅಭಿಪ್ರಾಯಪಟ್ಟಿತು. ಪ್ರಕರಣದ ವಿವರಗಳ ಪ್ರಕಾರ, ಪ್ರತಿವಾದಿ ಅಭ್ಯರ್ಥಿ ನೇಮಕಾತಿಯ ಮೊದಲ ಹಂತದಲ್ಲಿ ಅರ್ಹತೆ ಪಡೆದಿದ್ದರೂ, 2024ರ ಜನವರಿ 14ರಂದು ನಿಗದಿಯಾಗಿದ್ದ PE&MT ಪರೀಕ್ಷೆಗೆ ಶೀತ, ಕೆಮ್ಮು, ಜ್ವರ, ತಲೆನೋವು, ಮೈಕೈ ನೋವು ಹಾಗೂ ತಲೆತಿರುಗುವಿಕೆ ಮುಂತಾದ ಅನಾರೋಗ್ಯದ ಕಾರಣ ನೀಡಿ ಹಾಜರಾಗಲಿಲ್ಲ. ಬಳಿಕ ಪರೀಕ್ಷೆಯನ್ನು ಮರು ನಿಗದಿಪಡಿಸುವಂತೆ ಮೂರು ಬಾರಿ ಮನವಿ ಸಲ್ಲಿಸಿದ್ದಾಗಿ ಹೇಳಿಕೊಂಡಿದ್ದರು.

ಮುಂದಿನ ಬ್ಯಾಚ್‌ನೊಂದಿಗೆ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ನ್ಯಾಯಮಂಡಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ಕೂಡ ಈ ನಿರ್ದೇಶನದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ದೃಷ್ಟಿಕೋನವನ್ನು ತಿರಸ್ಕರಿಸಿ, ನೇಮಕಾತಿ ಜಾಹೀರಾತಿನಲ್ಲಿ PE&MT ವೇಳಾಪಟ್ಟಿ ಅಂತಿಮವಾಗಿದ್ದು ಯಾವುದೇ ಸಂದರ್ಭದಲ್ಲೂ ಬದಲಾಯಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಷರತ್ತು ವಿಧಿಸಲಾಗಿದೆ ಎಂಬುದನ್ನು ಗಣನೆಗೆ ತೆಗೆದುಕೊಂಡಿತು. ಸುಮಾರು ಒಂದು ಲಕ್ಷ ಮಂದಿ ಈ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದರೂ, ಪರೀಕ್ಷೆಯನ್ನು ಮರು ನಿಗದಿಪಡಿಸಬೇಕು ಎಂದು ಕೇಳಿದ ಏಕೈಕ ವ್ಯಕ್ತಿ ಈ ಅಭ್ಯರ್ಥಿಯೇ ಎಂದು ನ್ಯಾಯಾಲಯ ಹೇಳಿದೆ. ಅವರು ಮೂರು ಬಾರಿ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿಕೊಂಡಿದ್ದರೂ, ಅದಕ್ಕೆ ಯಾವುದೇ ದೃಢೀಕರಣ ಅಥವಾ ಸ್ವೀಕೃತಿ ದಾಖಲೆ ಇಲ್ಲ. ಆದ್ದರಿಂದ ಅವರ ಹೇಳಿಕೆಯನ್ನು ನ್ಯಾಯಾಲಯ ಪರಿಗಣಿಸಲಿಲ್ಲ. ಅನಾರೋಗ್ಯದ ನಡುವೆಯೂ ಕನಿಷ್ಠ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಅಧಿಕಾರಿಗಳಿಗೆ ತಮ್ಮ ಅಸಮರ್ಥತೆಯನ್ನು ತಿಳಿಸಿ, ಮರು ವೇಳಾಪಟ್ಟಿ ಕೋರುವ ಅವಕಾಶ ಅಭ್ಯರ್ಥಿಗೆ ಇತ್ತು. ಆದರೆ, ಅಭ್ಯರ್ಥಿ ಈ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಪರೀಕ್ಷೆಗೆ ಹಾಜರಾಗಲಿಲ್ಲ, ಅಧಿಕಾರಿಗಳಿಗೆ ನೇರವಾಗಿ ಮಾಹಿತಿ ನೀಡಲಿಲ್ಲ, ಅಲ್ಲಿ ಹೋಗಿ ತನ್ನ ಅಸಮರ್ಥತೆಯನ್ನು ದಾಖಲಿಸಲಿಲ್ಲ. ಆದ್ದರಿಂದ ಅಭ್ಯರ್ಥಿ ಈ ವಿಚಾರದಲ್ಲಿ ಗಂಭೀರತೆ ಪಾಲಿಸಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

Category
ಕರಾವಳಿ ತರಂಗಿಣಿ