ನವದೆಹಲಿ: ಅಡಿಕೆಗೆ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ (FSSAI) ನಿಗದಿಪಡಿಸಿರುವ ತೇವಾಂಶದ ಮಿತಿಯನ್ನು ಸಡಿಲಿಸುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್ ಪಾಸ್ವಾನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಸ್ತುತ ಎಫ್‌ಎಸ್‌ಎಸ್‌ಎಐ ನಿಯಮದಂತೆ ಅಡಿಕೆಯಲ್ಲಿ ಗರಿಷ್ಠ ತೇವಾಂಶದ ಪ್ರಮಾಣ ಶೇ. 7 ಇರಬೇಕು. ಆದರೆ, ದಕ್ಷಿಣ ಕನ್ನಡದಂತಹ ಅತಿ ಹೆಚ್ಚು ಆರ್ದ್ರತೆ ಹೊಂದಿರುವ ಕರಾವಳಿ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಅಡಿಕೆ ಒಣಗಿಸುವಾಗ ಇಷ್ಟು ಕಡಿಮೆ ತೇವಾಂಶ ಕಾಯ್ದುಕೊಳ್ಳುವುದು ಕಷ್ಟಕರವಾಗಿದೆ. ಈ ಕಠಿಣ ನಿಯಮದಿಂದಾಗಿ ಮಾರುಕಟ್ಟೆಯಲ್ಲಿ ಅಡಿಕೆಯನ್ನು ತಿರಸ್ಕರಿಸಲಾಗುತ್ತಿದೆ ಅಥವಾ ಕಡಿಮೆ ದರ್ಜೆಯದೆಂದು ಪರಿಗಣಿಸಲಾಗುತ್ತಿದೆ. ಇದರಿಂದ ಸಣ್ಣ ಬೆಳೆಗಾರರು ಮತ್ತು ಸಹಕಾರ ಸಂಘಗಳಿಗೆ ಭಾರಿ ಆರ್ಥಿಕ ನಷ್ಟವಾಗುತ್ತಿದೆ ಎಂದು ಸಂಸದರು ಸಚಿವರಿಗೆ ವಿವರಿಸಿದರು.
ಅಡಿಕೆಯಲ್ಲಿನ ತೇವಾಂಶ ಮಿತಿಯನ್ನು ಶೇ. 7ರಿಂದ ಶೇ. 11ಕ್ಕೆ ಏರಿಸಬೇಕು ಮತ್ತು ಅಡಿಕೆಯನ್ನು 'ಹಣ್ಣು ಮತ್ತು ಬೀಜಗಳು' ವರ್ಗದ ಬದಲು ಅದರ ನೈಜ ಗುಣಲಕ್ಷಣಗಳಿಗೆ ಅನುಗುಣವಾಗಿ ವೈಜ್ಞಾನಿಕವಾಗಿ ಮರು ವರ್ಗೀಕರಿಸಬೇಕು ಎಂದು ಅವರು ಆಗ್ರಹಿಸಿದರು. ಅಲ್ಲದೆ, ಮಾರುಕಟ್ಟೆಯಲ್ಲಿ ಪಾರದರ್ಶಕವಾದ ತೇವಾಂಶ ಪರೀಕ್ಷಾ ವ್ಯವಸ್ಥೆ ಇಲ್ಲದಿರುವುದರಿಂದ ರೈತರು ಶೋಷಣೆಗೆ ಒಳಗಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಮೂಲಸೌಕರ್ಯ ಹಾಗೂ ಸ್ಪಷ್ಟ ಮಾನದಂಡಗಳನ್ನು ರೂಪಿಸಬೇಕೆಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವ ಚಿರಾಗ್ ಪಾಸ್ವಾನ್, ಸಮಸ್ಯೆಗಳನ್ನು ಪರಿಶೀಲಿಸುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳನ್ನು ಭೇಟಿ ಮಾಡಿ ಈ ತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚಿಸುವುದಾಗಿ ಕ್ಯಾ. ಚೌಟ ತಿಳಿಸಿದ್ದಾರೆ.