ಮುಂಬೈ : ಅಮೆರಿಕ ಮೂಲದ ಐಟಿ ಕಂಪನಿ ಒರಾಕಲ್ ಭಾರತದಲ್ಲಿ ಸುಮಾರು 12,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದೆ. ಈಗ ಮತ್ತೆ ಒಂದು ತಿಂಗಳೊಳಗೆ ಮತ್ತೊಂದು ಸುತ್ತಿನ ವಜಾಗೊಳಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಜಾಗತಿಕವಾಗಿ, ಕಂಪನಿಯು ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಮೆರಿಕ ಮತ್ತು ಕೆನಡಾದಲ್ಲಿಯೂ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆ ಆರಂಭ ಮಾಡಿದೆ. ಹೆಚ್ಚಿನ ಸಾಫ್ಟ್‌ವೇರ್ ಡೆವಲಪರ್‌ಗಳ ಮೇಲೆ ಇದು ಪ್ರಭಾವ ಬೀರಿದೆ ಎಂದು ವರದಿಯಾಗಿದೆ. ಈಗಾಗಲೇ ಭಾರತದಲ್ಲಿರುವ ಒರಾಕಲ್‌ನ ಉದ್ಯೋಗಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದರೂ, ಅಮೆರಿಕದಲ್ಲಿರುವ ಒರಾಕಲ್ ಕಂಪನಿಯ ಉದ್ಯೋಗಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿಲ್ಲ. ಇನ್ನು ಕೆನಡಾದಲ್ಲಿರುವ ಉದ್ಯೋಗಿಗಳಿಗೆ ಈ ವಾರ ಮಾಹಿತಿ ಸಿಗುವ ಸಾಧ್ಯತೆ ಇದೆ. ನಿಖರ ಸಂಖ್ಯೆಯ ಅಧಿಕೃತ ದೃಢೀಕರಣವಿಲ್ಲದಿದ್ದರೂ, ವಿಶ್ವದ ಇತರ ಪ್ರದೇಶಗಳಲ್ಲಿನ ಉದ್ಯೋಗಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.