image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬಿಹಾರದ ಶೀತಲಾ ಮಾತಾ ದೇವಾಲಯದಲ್ಲಿ ಕಾಲ್ತುಳಿತ

ಬಿಹಾರದ ಶೀತಲಾ ಮಾತಾ ದೇವಾಲಯದಲ್ಲಿ ಕಾಲ್ತುಳಿತ

ಬಿಹಾರ : ನಳಂದ ಜಿಲ್ಲೆಯ ದೇಗುಲವೊಂದರಲ್ಲಿ ನಡೆದ ಕಾಲ್ತುಳಿತದಲ್ಲಿ ಒಟ್ಟು 9 ಜನ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಇಲ್ಲಿನ ಶೀತಲಾ ಮಾತಾ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಈ ದುರಂತದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದು, ಅವರಲ್ಲಿ ಎಂಟು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದರೆ, ಒಬ್ಬ ಪುರುಷ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಚೈತ್ರ ಮಾಸದ ಕೊನೆಯ ಮಂಗಳವಾರವಾದ ಶೀತಲ ಅಷ್ಟಮಿ ಕಾರ್ಯಕ್ರಮಕ್ಕೆ ನಿರೀಕ್ಷೆಯನ್ನು ಮೀರಿ ಭಾರಿ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆ ಈ ದುರಂತ ಸಂಭವಿಸಿದೆ. ಇಷ್ಟೊಂದು ಜನರನ್ನು ನಿಯಂತ್ರಿಸಲು ಅಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದರ್ಶನ ಪಡೆಯಲು ಬಂದ ಸಮಯದಲ್ಲಿ ನೂಕು ನುಗ್ಗಲು ಉಂಟಾದ ನಂತರ ಈ ಕಾಲ್ತುಳಿತ ನಡೆದಿದ್ದು, ಘಟನೆಯ ಬಳಿಕ ದೇಗುಲವನ್ನು ಬಂದ್ ಮಾಡಲಾಗಿದೆ. ದೇಗುಲಕ್ಕೆ 10 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಗಿ ದುರಂತ ಸಂಭವಿಸಿದೆ. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ₹6 ಲಕ್ಷ ಪರಿಹಾರ ಘೋಷಿಸಿದರೆ, ಕೇಂದ್ರ ಸರ್ಕಾರ ₹2 ಲಕ್ಷ ಪರಿಹಾರ ಘೋಷಿಸಿದೆ.

'ಚೈತ್ರ' ಹಬ್ಬದ ಜೊತೆಗೆ, ಮಾ ಶೀತಲಾ ದೇವಿ ದೇವಾಲಯದ ಆವರಣದಲ್ಲಿ ಜಾತ್ರೆಯೂ ಇತ್ತು. ದೇವಾಲಯದ ಸಣ್ಣ ಗರ್ಭಗುಡಿಯು ಜನರಿಂದ ತುಂಬಿ ಹೋಗಿತ್ತು. ಕೆಲವರು ಬೇಗ ಬೇಗ ದರ್ಶನಕ್ಕಾಗಿ ಕ್ಯೂ ಮುರಿಯಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿತು. ಇಲ್ಲಿಯಾವುದೇ ಭದ್ರತಾ ವ್ಯವಸ್ಥೆಗಳು ಜಾರಿಯಲ್ಲಿ ಇರಲಿಲ್ಲ. ದೇವಾಲಯವು ಜನದಟ್ಟಣೆಯಿಂದ ತುಂಬಿತ್ತು, ಮತ್ತು ಒಳಗೆ ಯಾವುದೇ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿಲ್ಲ. ಜನಸಂದಣಿಯನ್ನು ಬೇರೆಡೆಗೆ ತಿರುಗಿಸಲು ಅಥವಾ ಎರಡು ಸಾಲುಗಳನ್ನು ರೂಪಿಸಲು ಯಾವುದೇ ವ್ಯವಸ್ಥೆ ಇರಲಿಲ್ಲ ಎಂದು ಭಕ್ತರೊಬ್ಬರು ಹೇಳಿದ್ದಾರೆ. ದೇಗುಲದ ಅರ್ಚಕರು ಬೇಗ ಬೇಗ ತೆರಳುವಂತೆ ಜನರನ್ನು ಒತ್ತಾಯಿಸುತ್ತಲೇ ಇದ್ದರು. ಈ ಸಮಯದಲ್ಲಿ, ಒಬ್ಬ ಮಹಿಳೆ ತಲೆತಿರುಗಿ ಬಿದ್ದರು. ಕೆಲವರು ಅವಳಿಗೆ ಸಹಾಯ ಮಾಡಲು ಪ್ರಯತ್ನಿಸಿದರೆ, ಇತರರು ಗುಂಪನ್ನು ಮುಂದೆ ತಳ್ಳಿದರು. ಆಗ ಕಾಲ್ತುಳಿತ ಸಂಭವಿಸಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ