image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಏಪ್ರಿಲ್ 1 ರಿಂದ ಚೀನಾ ಮೂಲದ ಪ್ರಮುಖ ವೀಡಿಯೊ ಕಣ್ಗಾವಲು ಕಂಪನಿಗಳ ನಿಷೇಧಕ್ಕೆ ಸಿದ್ಧತೆ!

ಏಪ್ರಿಲ್ 1 ರಿಂದ ಚೀನಾ ಮೂಲದ ಪ್ರಮುಖ ವೀಡಿಯೊ ಕಣ್ಗಾವಲು ಕಂಪನಿಗಳ ನಿಷೇಧಕ್ಕೆ ಸಿದ್ಧತೆ!

ನವದೆಹಲಿ : ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಭಾರತ ಸರ್ಕಾರವು ಚೀನಾದ ಸಿಸಿಟಿವಿ ಕ್ಯಾಮೆರಾ ಕಂಪನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಏಪ್ರಿಲ್ 1 ರಿಂದ ಚೀನಾ ಮೂಲದ ಪ್ರಮುಖ ವೀಡಿಯೊ ಕಣ್ಗಾವಲು ಕಂಪನಿಗಳಾದ ಹಿಕ್-ವಿಷನ್, ದಹುವಾ ಮತ್ತು ಟಿಪಿ-ಲಿಂಕ್ ನಂತಹ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳ ಮಾರಾಟವನ್ನು ನಿಷೇಧಿಸಲು ಸಿದ್ಧತೆ ನಡೆಸಲಾಗಿದೆ ಎಂದು ವರದಿಯಾಗಿದೆ. ಮುಂದಿನ ತಿಂಗಳಿನಿಂದ 'ಸ್ಟ್ಯಾಂಡರ್ಡೈಸೇಶನ್ ಟೆಸ್ಟಿಂಗ್ ಅಂಡ್ ಕ್ವಾಲಿಟಿ ಸರ್ಟಿಫಿಕೇಶನ್' (STQC) ಅಡಿಯಲ್ಲಿ ಹೊಸ ಪ್ರಮಾಣೀಕರಣ ನಿಯಮಗಳು ಜಾರಿಗೆ ಬರಲಿವೆ. ಇದರ ಅನ್ವಯ, ಯಾವುದೇ ಸಿಸಿಟಿವಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡುವ ಮೊದಲು ಸರ್ಕಾರದ ಕಡ್ಡಾಯ ಅನುಮೋದನೆ ಪಡೆಯಲೇಬೇಕು. ವರದಿಗಳ ಪ್ರಕಾರ, ಈ ಚೀನೀ ಕಂಪನಿಗಳಿಗೆ ಮತ್ತು ಚೀನಾ ಮೂಲದ ಚಿಪ್‌ಸೆಟ್‌ಗಳನ್ನು ಬಳಸುವ ಯಾವುದೇ ಸಾಧನಗಳಿಗೆ ಕೇಂದ್ರ ಸರ್ಕಾರವು ಪ್ರಮಾಣೀಕರಣ ನೀಡಲು ನಿರಾಕರಿಸುತ್ತಿದೆ. STQC ಅನುಮೋದನೆ ಇಲ್ಲದೆ, ಈ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಲು ಸಾಧ್ಯವಿಲ್ಲ. 

ಒಂದು ಕಾಲದಲ್ಲಿ ಭಾರತದ ಸಿಸಿಟಿವಿ ಮಾರುಕಟ್ಟೆಯನ್ನು ಚೀನಾ ಕಂಪನಿಗಳೇ ಆಳುತ್ತಿದ್ದವು. ಕಳೆದ ವರ್ಷದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಮಾರಾಟವಾಗುವ ಒಟ್ಟು ಸಿಸಿಟಿವಿಗಳಲ್ಲಿ ಮೂರನೇ ಒಂದು ಭಾಗ ಚೀನಾ ಕಂಪನಿಗಳದ್ದೇ ಇತ್ತು. ಆದರೆ ಸರ್ಕಾರದ ಈ ಕ್ರಮವು ಚೀನಾ ಬ್ರ್ಯಾಂಡ್‌ಗಳಿಗೆ ದೊಡ್ಡ ಆಘಾತ ನೀಡಲಿದೆ. ಚೀನಾ ಕಂಪನಿಗಳ ಜಾಗವನ್ನು ಭಾರತೀಯ ಕಂಪನಿಗಳು ಅತ್ಯಂತ ವೇಗವಾಗಿ ತುಂಬುತ್ತಿವೆ. CP Plus, Qubo, Prama, Matrix ಮತ್ತು Sparsh ನಂತಹ ದೇಶೀಯ ಕಂಪನಿಗಳು ಮಾರುಕಟ್ಟೆಯಲ್ಲಿ ಅಗ್ರಸ್ಥಾನಕ್ಕೇರುತ್ತಿವೆ. ಈ ಕಂಪನಿಗಳು ಚೀನಾ ಬಿಡಿಭಾಗಗಳ ಬದಲಿಗೆ ತೈವಾನ್ ಚಿಪ್‌ಸೆಟ್‌ಗಳನ್ನು ಬಳಸುತ್ತಿವೆ ಮತ್ತು ತಮ್ಮದೇ ಆದ ಸಾಫ್ಟ್‌ವೇರ್ ಅಳವಡಿಸಿಕೊಂಡಿವೆ. ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಫೆಬ್ರವರಿ ವೇಳೆಗೆ ಭಾರತದ ಶೇ. 80ಕ್ಕೂ ಹೆಚ್ಚು ಮಾರುಕಟ್ಟೆ ಈಗ ದೇಶೀಯ ಕಂಪನಿಗಳ ಕೈಯಲ್ಲಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಕೆಲವು ನಿಯಮಗಳನ್ನು ರೂಪಿಸಿದ್ದು, ತಯಾರಕರು ತಮ್ಮ ಸಿಸಿಟಿವಿಯಲ್ಲಿ ಬಳಸುವ ಚಿಪ್‌ಸೆಟ್ (SoC) ಯಾವ ದೇಶದ್ದು ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕು. ಅಲ್ಲದೆ, ಸಿಸಿಟಿವಿ ಕ್ಯಾಮೆರಾಗಳನ್ನು ರಿಮೋಟ್ ಮೂಲಕ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂಬ ಬಗ್ಗೆ ಕಠಿಣ ಪರೀಕ್ಷೆ ನಡೆಸಲಾಗುತ್ತದೆ. ಡೇಟಾ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದಿದೆ. ಈ ನಿಯಮಗಳನ್ನು ಪಾಲಿಸಲು ಕಂಪನಿಗಳಿಗೆ ಎರಡು ವರ್ಷಗಳ ಕಾಲಾವಕಾಶ ನೀಡಲಾಗಿತ್ತು. ಈಗಾಗಲೇ 500ಕ್ಕೂ ಹೆಚ್ಚು ಹೊಸ ಮಾದರಿಯ ಸಿಸಿಟಿವಿಗಳು ಈ ಪರೀಕ್ಷೆಯಲ್ಲಿ ಪಾಸ್ ಆಗಿ ಪ್ರಮಾಣೀಕರಣ ಪಡೆದುಕೊಂಡಿವೆ.

Category
ಕರಾವಳಿ ತರಂಗಿಣಿ