ಮಥುರಾ : ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸನಾತನ ಧರ್ಮದ ಅಸ್ತಿತ್ವವನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಬೇಕಾದರೆ ಪ್ರತಿಯೊಂದು ಹಿಂದೂ ಕುಟುಂಬವು ಕನಿಷ್ಠ ಮೂರು ಮಕ್ಕಳನ್ನು ಹೊಂದಲೇಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರು ಬಲವಾಗಿ ಪ್ರತಿಪಾದಿಸಿದ್ದಾರೆ. ಉತ್ತರ ಪ್ರದೇಶದ ಮಥುರಾದಲ್ಲಿ ನೂತನ ಆಶ್ರಮವೊಂದನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ದೇಶದ ಜನಸಂಖ್ಯಾ ನೀತಿ, ಬದಲಾಗುತ್ತಿರುವ ಜನಸಂಖ್ಯಾ ಚಿತ್ರಣ ಮತ್ತು ಅಕ್ರಮ ನುಸುಳುವಿಕೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಭಾರತದ ಜನಸಂಖ್ಯೆ ಮತ್ತು ಸಾಂಸ್ಕೃತಿಕ ಭದ್ರತೆಯ ದೃಷ್ಟಿಯಿಂದ ಹಿಂದೂಗಳು ಜಾಗೃತರಾಗಬೇಕಾದ ಸಮಯ ಬಂದಿದೆ ಎಂದು ಅವರು ಎಚ್ಚರಿಸಿದರು.
ಸಮಾಜಶಾಸ್ತ್ರ ಮತ್ತು ಜನಸಂಖ್ಯಾ ಅಧ್ಯಯನಗಳನ್ನು ಉಲ್ಲೇಖಿಸಿ ಮಾತನಾಡಿದ ಭಾಗವತ್, ಯಾವುದೇ ಸಮಾಜದ ಸಂತಾನೋತ್ಪತ್ತಿ ದರವು (Fertility Rate) ಮೂರಕ್ಕಿಂತ ಕಡಿಮೆಯಾದರೆ, ಅಂತಹ ಸಮಾಜವು ದೀರ್ಘಾವಧಿಯಲ್ಲಿ ಅವನತಿಯ ಹಾದಿ ಹಿಡಿಯುತ್ತದೆ ಎಂಬುದು ವಿಜ್ಞಾನದ ಮಾತು. ಇಂದು ವಿಶ್ವದ ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಜನಸಂಖ್ಯೆಯ ಕೊರತೆಯಿಂದ ಬಳಲುತ್ತಿವೆ ಮತ್ತು ಜನಸಂಖ್ಯೆಯನ್ನು ಹೆಚ್ಚಿಸಲು ಹೆಣಗಾಡುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತವು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು. ಕೇವಲ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲ, ಕೌಟುಂಬಿಕ ಮೌಲ್ಯಗಳ ದೃಷ್ಟಿಯಿಂದಲೂ ಮೂರು ಮಕ್ಕಳ ಅಗತ್ಯವಿದೆ. ಮಕ್ಕಳು ಉತ್ತಮ ಸಾಮಾಜಿಕ ಕೌಶಲಗಳನ್ನು ಬೆಳೆಸಿಕೊಳ್ಳಲು ಮತ್ತು ಗುಂಪಿನಲ್ಲಿ ಬೆರೆತು ಹೊಂದಾಣಿಕೆಯ ಗುಣವನ್ನು ಕಲಿಯಲು ಕುಟುಂಬದಲ್ಲಿ ಕನಿಷ್ಠ ಮೂರು ಮಕ್ಕಳಿರಬೇಕು ಎಂದು ವೈದ್ಯಕೀಯ ಲೋಕವೂ ಶಿಫಾರಸು ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ದೇಶದ ಆಂತರಿಕ ಭದ್ರತೆಗೆ ಸವಾಲಾಗಿರುವ ಅಕ್ರಮ ವಲಸಿಗರ ಬಗ್ಗೆ ಕಟುವಾದ ಮಾತುಗಳನ್ನಾಡಿದ ಭಾಗವತ್, ಗಡಿ ದಾಟಿ ಬರುವ ನುಸುಳುಕೋರರ ಬಗ್ಗೆ ಸಾರ್ವಜನಿಕರು ಹದ್ದಿನ ಕಣ್ಣಿಡಬೇಕು ಎಂದು ಕರೆ ನೀಡಿದರು. ನಮ್ಮ ದೇಶದೊಳಗೆ ಅಕ್ರಮವಾಗಿ ಬಂದು ನೆಲೆಸಿರುವವರನ್ನು ಗುರುತಿಸುವುದು ಕೇವಲ ಸರ್ಕಾರದ ಕೆಲಸವಲ್ಲ, ಸಮಾಜವೂ ಈ ಬಗ್ಗೆ ಜಾಗ್ರತೆ ವಹಿಸಬೇಕು. ಅಂತಹವರಿಗೆ ಸ್ಥಳೀಯವಾಗಿ ಉದ್ಯೋಗ ಸಿಗದಂತೆ ನೋಡಿಕೊಳ್ಳುವ ಮೂಲಕ ಆರ್ಥಿಕವಾಗಿ ಅವರನ್ನು ತಡೆಯಬೇಕು. ಅವರ ಚಲನವಲನಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಆದರೆ, ಈ ಪ್ರಕ್ರಿಯೆಯಲ್ಲಿ ಯಾವುದೇ ಭಾರತೀಯ ನಾಗರಿಕನಿಗೆ ತೊಂದರೆ ಅಥವಾ ತಾರತಮ್ಯವಾಗದಂತೆ ಎಚ್ಚರ ವಹಿಸುವುದು ನಮ್ಮ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು.