ಹಿಮಾಚಲ : ಹಿಮಾಚಲ ಪ್ರದೇಶದಲ್ಲಿ ಗಂಭೀರ ಆರ್ಥಿಕ ಸಂಕಷ್ಟ ಎದುರಾಗಿದ್ದು, ವೇತನ ಕೊಡಲು ದುಡ್ಡಿಲ್ಲ ಈ ಹಿನ್ನೆಲೆಯಲ್ಲಿ ಮಹತ್ವದ ನಿರ್ಧಾರಗಳನ್ನು ಘೋಷಿಸಿರುವ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ತಾತ್ಕಾಲಿಕವಾಗಿ ಆರು ತಿಂಗಳ ಕಾಲ ವೇತನ ಕಡಿತವನ್ನು ಘೋಷಿಸಿದ್ದಾರೆ. ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ವೇತನವನ್ನು ತಾತ್ಕಾಲಿಕವಾಗಿ ಆರು ತಿಂಗಳ ಕಾಲ ಮುಂದೂಡುವುದಾಗಿ ತಿಳಿಸಿದ್ದಾರೆ. ಈ ಕ್ರಮ ರಾಜ್ಯದ ಹಣಕಾಸು ಸ್ಥಿತಿಯನ್ನು ಸುಧಾರಿಸುವ ದಿಸೆಯಲ್ಲಿ ಕೈಗೊಳ್ಳಲಾದ ಕಠಿಣ ಆದರೆ ಅಗತ್ಯ ಕ್ರಮವೆಂದು ಸರ್ಕಾರ ವಿವರಿಸಿದೆ. 2026-27ನೇ ಸಾಲಿನ ಬಜೆಟ್ ಮಂಡನೆ ವೇಳೆ ಸಿಎಂ ಸುಖು ಈ ಘೋಷಣೆ ಮಾಡಿದರು. ರಾಜ್ಯದ ಒಟ್ಟು ವೆಚ್ಚವನ್ನು ₹3,586 ಕೋಟಿಗಳಷ್ಟು ಕಡಿತಗೊಳಿಸಲಾಗಿದೆ. 2025-26ರಲ್ಲಿ ₹58,514 ಕೋಟಿ ಇದ್ದ ಬಜೆಟ್ ಗಾತ್ರವನ್ನು 2026-27ರಲ್ಲಿ ₹54,928 ಕೋಟಿಗೆ ಇಳಿಸಲಾಗಿದೆ.
ವೇತನ ಮುಂದೂಡಿಕೆ ಕ್ರಮದಡಿ ಸಿಎಂ ಅವರ ವೇತನದ 50%, ಸಚಿವರ ವೇತನದ 30%, ಶಾಸಕರ ವೇತನದ 20%, ಆರು ತಿಂಗಳ ಕಾಲ ಮುಂದೂಡಲಾಗುತ್ತದೆ. ಹಿರಿಯ ಅಧಿಕಾರಿಗಳಲ್ಲಿ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿಗಳು ಹಾಗೂ ಡಿಜಿಪಿ ಮಟ್ಟದ ಅಧಿಕಾರಿಗಳ ವೇತನದ 30% ಮುಂದೂಡಿಕೆ ಮಾಡಲಾಗುತ್ತದೆ. ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 20% ಮಟ್ಟದಲ್ಲಿ ಮುಂದೂಡಿಕೆ ಅನ್ವಯವಾಗಲಿದೆ. ಪೊಲೀಸ್ ಇಲಾಖೆಯಲ್ಲಿ ಎಡಿಜಿಪಿಯಿಂದ ಡಿಐಜಿ ಹಂತದವರೆಗೆ 30% ಮತ್ತು ಎಸ್‌ಪಿ ಮಟ್ಟದ ಅಧಿಕಾರಿಗಳಿಗೆ 20% ವೇತನ ಮುಂದೂಡಿಕೆ ಜಾರಿಗೆ ಬರಲಿದೆ. ಅಲ್ಲದೆ, ನೌಕರರಿಗೆ ನಿಗದಿಪಡಿಸಿದ್ದ 3% ವೇತನ ಹೆಚ್ಚಳವನ್ನೂ ಆರು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ. ಬಜೆಟ್ ಭಾಷಣದಲ್ಲಿ ಸಿಎಂ ಸುಖು, ಕೇಂದ್ರ ಸರ್ಕಾರದಿಂದ ಲಭ್ಯವಾಗುತ್ತಿದ್ದ ಆದಾಯ ಕೊರತೆ ಅನುದಾನ (RDG) ಸ್ಥಗಿತಗೊಳಿಸಿರುವುದನ್ನು ಪ್ರಮುಖ ಕಾರಣವೆಂದು ಉಲ್ಲೇಖಿಸಿದರು. ಇದರಿಂದ ರಾಜ್ಯದ ಹಣಕಾಸಿನ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಿದೆ ಎಂದು ಹೇಳಿದರು. "ನಾವು ಚುನಾವಣೆಗೆ ಅಲ್ಲ, ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ. ಈ ಸಂಕಷ್ಟದ ಅವಧಿಯಲ್ಲಿ ಎಲ್ಲಾ ವರ್ಗಗಳ ಸಹಕಾರ ಅಗತ್ಯ" ಎಂದು ಅವರು ಮನವಿ ಮಾಡಿದರು. ಹಿಮಾಚಲ ಪ್ರದೇಶವನ್ನು ಸ್ವಾವಲಂಬಿ ರಾಜ್ಯವನ್ನಾಗಿ ರೂಪಿಸುವತ್ತ ಸರ್ಕಾರ ಮುಂದಾಗಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.